ರಾಜ್ಯ

ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ಅಭೂತಪೂರ್ವ ಸ್ಪಂದನೆ: ಸಾರ್ವಜನಿಕರಿಂದ 6,684 ಅಹವಾಲು ಸಲ್ಲಿಕೆ

Nagaraja AB

ಬೆಂಗಳೂರು: ಮೊಟ್ಟಮೊದಲ ಬಾರಿಗೆ ರಾಜ್ಯದ ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಸೋಮವಾರ ಏಕಕಾಲದಲ್ಲಿ ನಡೆದ ಜಿಲ್ಲಾಮಟ್ಟದ ಜನತಾದರ್ಶನಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಇಂದು ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಜನತಾ ದರ್ಶನ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರಿಂದ ನಡೆದ ಜನತಾ ದರ್ಶನದಲ್ಲಿ ಶಾಸಕರು, ಸಂಸದರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡರು. 

ಮುಖ್ಯಮಂತ್ರಿಗಳ ಕಚೇರಿ (CMO) ಹೊರಡಿಸಿದ ಹೇಳಿಕೆಯ ಪ್ರಕಾರ, ಸಂಜೆ 6.30 ರವರೆಗೆ, ಕರ್ನಾಟಕದಾದ್ಯಂತ 6,684 ದೂರುಗಳು ಮತ್ತು ಕುಂದುಕೊರತೆಗಳನ್ನು ಸ್ವೀಕರಿಸಲಾಗಿದೆ ಮತ್ತು 21 ಸ್ಥಳದಲ್ಲೇ ಪರಿಹರಿಸಲಾಗಿದೆ. ಉಳಿದ 6,663 ಅರ್ಜಿಗಳನ್ನು ನೋಂದಾಯಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಲಾಗಿದೆ.

ಅತಿ ಹೆಚ್ಚು 2,100 ದೂರುಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಆರ್ ಡಿಪಿಆರ್ ಇಲಾಖೆಗೆ 1,000 ಕ್ಕೂ ಹೆಚ್ಚು ದೂರುಗಳು ಬಂದಿವೆ. ಹೆಚ್ಚಿನ ದೂರುಗಳು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸಲ್ಲಿಕೆಯಾಗಿದ್ದರೆ, ಕೆಲವು ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆಯಾಗಿದ್ದವು. ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೆಲವೇ ದೂರುಗಳು ಸಲ್ಲಿಕೆಯಾಗಿವೆ.

ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು 774 ದೂರು ದಾಖಲಾಗಿದ್ದು, ಹಾಗೂ ಕೋಲಾರದಲ್ಲಿ 432 ದೂರು ದಾಖಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಸಾವಿರಾರು ಅರ್ಜಿಗಳು ಬಂದಿವೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರವನ್ನೇ ಜನರ ಬಳಿಗೆ ಕೊಂಡೊಯ್ದು ಅವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಅಥವಾ ನಿಗದಿತ ಕಾಲಮಿತಿಯಲ್ಲಿ ಪರಿಹಾರ ಒದಗಿಸುವುದು ನಮ್ಮ ಗುರಿ ಎಂದಿದ್ದಾರೆ. 

SCROLL FOR NEXT