ರಾಜ್ಯ

ಕಾವೇರಿ ನೀರು ಹರಿಸದಿರಲು ಸರ್ಕಾರಕ್ಕೆ 3 ದಿನ ಗಡುವು, ಪೊಲೀಸರು ಕೇಸ್ ವಾಪಸ್ ಪಡೆಯಬೇಕು: ಕುರುಬೂರು ಶಾಂತಕುಮಾರ್

Sumana Upadhyaya

ಬೆಂಗಳೂರು: ಕಾವೇರಿ ವಿಚಾರವಾಗಿ ಬೆಂಗಳೂರು ಬಂದ್ ಹಿನ್ನಲೆಯಲ್ಲಿ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮನವಿ ಸ್ವೀಕರಿಸಿದ್ದಾರೆ. ಈ ಮೂಲಕ ಪ್ರತಿಭಟನಾಕಾರರ ಪ್ರತಿಭಟನೆ ಮುಕ್ತಾಯವಾಗಿದೆ. 

ಕಾವೇರಿ ನದಿ ನೀರನ್ನು ತಮಿಳು ನಾಡಿಗೆ ಬಿಡುವ ವಿಚಾರದಲ್ಲಿ ಸರ್ಕಾರಕ್ಕೆ ಮೂರು ದಿನಗಳ ಗಡುವನ್ನು ಪ್ರತಿಭಟನಾಕಾರರು ನೀಡಿದ್ದಾರೆ.  ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರಕ್ಕೆ ಒತ್ತಾಯ ಪತ್ರ ಸಲ್ಲಿಕೆ ಮಾಡಿದ ಹೋರಾಟಗಾರರು,‌ ತಕ್ಷಣ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಹಾಗೂ ರೈತ ಮುಖಂಡರ ಮೇಲೆ ಇರುವ ಕೇಸ್ ಗಳನ್ನ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

‌ಸ್ಥಳಕ್ಕೆ ಸಿಎಂ ಬರಬೇಕು ಅಂತ ಒತ್ತಾಯ ಮಾಡಿದ್ದೆವು. ನಾಳೆ ನಾಡಿದ್ದು ಹೋರಾಟಗಾರರನ್ನ ಕರೆಸಿ ಮಾತನಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೂರು ದಿನಗಳಲ್ಲಿ ಸರ್ಕಾರ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾ ಸ್ಥಳದಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದರು. ನಮ್ಮ ಮನವಿ ಪುರಸ್ಕರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ. 

ಪ್ರತಿಭಟನಾಕಾರರನ್ನು‌ ಉದ್ದೇಶಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ನೆಲ ಜಲ‌ ಭಾಷೆ ಗೆ ಅನ್ಯಾಯ ಆದಾಗ ಹೋರಾಟ ಮಾಡುತ್ತಾ ಬಂದಿದ್ದಾರೆ. ಸರ್ಕಾರ 5 ವಿಚಾರಗಳನ್ನು ಹೇಳಿದೆ. ಮೂರು ದಿನಗಳಲ್ಲಿ ಮುಖಂಡರ ಸಭೆಯನ್ನು ಸಿಎಂ ಕರೆಯುವುದಾಗಿ ಹೇಳಿದ್ದಾರೆ. ಪೊಲೀಸರು ಹಾಕಿರುವ ಕೇಸ್ ಗಳನ್ನು ವಾಪಸ್ ತೆಗೆದುಕೊಳ್ಳುವ ವಿಚಾರ ಸೂಕ್ತ ಕ್ರಮ ಆಗುತ್ತದೆ ಎಂದಿದ್ದಾರೆ. 

ಮೇಕೆ ದಾಟು ಅಣೆಕಟ್ಟು ವಿಚಾರದಲ್ಲಿ ಕ್ರಮ ಆಗುತ್ತದೆ. ಮಳೆ ಇಲ್ಲದ ಸಂದರ್ಭದಲ್ಲಿ ಸಂಕಷ್ಟ ಸೂತ್ರಕ್ಕಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಂಕಷ್ಟ ಸೂತ್ರ ರಚನೆ ಆಗಲೇಬೇಕು. ಪ್ರತಿಭಟನಾಕಾರರ ಮನವಿಯನ್ನು ಮುಖ್ಯ ಮಂತ್ರಿಗೆ ತಲುಪಿಸುತ್ತೇನೆ ಎಂದರು.

ಮುಖ್ಯಮಂತ್ರಿಗಳ ಪರವಾಗಿ ಮನವಿ ಸ್ವೀಕರಿಸಿದ್ದೇನೆ. ನೀರು ಹರಿಸಬಾರದು ಎಂದು, ಸಂಕಷ್ಟ ಕಾಲದಲ್ಲಿ ಸಮಿತಿ ನಿರ್ಮಿಸಬೇಕು ಎಂದು, ಈ ಹಿಂದೆ ಕನ್ನಡ ಭಾಷೆ,ನೆಲ, ಜಲದ ಬಗ್ಗೆ ಹಾಕಿರುವ ಪ್ರಕರಣ ರದ್ದು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ನಮ್ಮ ಸರ್ಕಾರ ಕರ್ನಾಟಕದ ರೈತರ ಪರ ಇದೆ. ಸಿಎಂ ಜೊತೆ ಚರ್ಚಿಸುತ್ತೇನೆ ಎಂದರು.

SCROLL FOR NEXT