ರಾಜ್ಯ

ಬೆಳೆ ನಾಶಕ್ಕೆ ಕಾರಣರಾದ ಅರಣ್ಯಾಧಿಕಾರಿಗಳ ಅಮಾನತುಗೊಳಿಸಿ: ಬಿಜೆಪಿ ಆಗ್ರಹ

Manjula VN

ಬೆಂಗಳೂರು: ಅರಣ್ಯ ಭೂಮಿ ಒತ್ತುವರಿ ತೆರವಿಗೆ ಅಡ್ಡಿಪಡಿಸಿದ ಆರೋಪ ಹಿನ್ನೆಲೆಯಲ್ಲಿ ರೈತರನ್ನು ಜಮೀನುಗಳಿಂದ ಹೊರಗೆ ಹಾಕಿ ಬೆಳೆ ನಾಶಕ್ಕೆ ಕಾರಣರಾದ ಅರಣ್ಯಾಧಿಕಾರಿಗಳ ಅಮಾನತುಗೊಳಿಸುವಂತೆ ಬಿಜೆಪಿ ಆಗ್ರಹಿಸಿದೆ.

ಪತ್ರಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್ ಅವರು, ಅಧಿಕಾರದ ಅಮಲಿನಲ್ಲಿರುವ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಸಂಸದ ಮುನಿಸ್ವಾಮಿ ಮೇಲೆ ಅಲ್ಲಿನ ಎಸ್‌ಪಿ ದೌರ್ಜನ್ಯ ಎಸಗಿದ್ದಾರೆ. ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅ.3ರಂದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಶ್ರೀನಿವಾಸಪುರ ತಾಲ್ಲೂಕಿನ ಹಳ್ಳಿಗಳಲ್ಲಿ ಮಾವು, ರೇಷ್ಮೆ, ಟೊಮೆಟೊ, ತೆಂಗು, ತರಕಾರಿ ಬೆಳೆಯುವ ನೂರಾರು ಎಕರೆ ಜಮೀನಿನಲ್ಲಿ ಸಂಪೂರ್ಣ ಬೆಳೆ ನಾಶ ಮಾಡಿದ್ದಾರೆ. 30-40 ವರ್ಷದ ಮಾವಿನ ಮರಗಳನ್ನು ಕಡಿದು ಹಾಕಿದ್ದಾರೆ. ಸರ್ಕಾರ ರೈತರ ಪರ ನಿಲ್ಲದೇ ಅಧಿಕಾರಿಗಳಿಗೆ ಕುಮ್ಮಕ್ಕು ಕೊಡುತ್ತಿದೆ. ಹೋರಾಟ ಮಾಡಿದ ರೈತರನ್ನು ಬಂಧಿಸಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರೈತ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ಪ್ರಾಧಿಕಾರ ಹಾಗೂ ಸುಪ್ರೀಂಕೋರ್ಟ್‌ಗೆ ಸರ್ಕಾರ ವಾಸ್ತವಸ್ಥಿತಿ ಮನವರಿಕೆ ಮಾಡಿಕೊಟ್ಟಿಲ್ಲ. ಇದರಿಂದ ರಾಜ್ಯದ ರೈತರಿಗೆ ಅನ್ಯಾಯವಾಗಿದೆ ಎಂದರು.

SCROLL FOR NEXT