ರಾಜ್ಯ

ಕರ್ನಾಟಕ ಬಂದ್​: ತಮಿಳು ಸಂಘಟನೆಗಳ ಒಕ್ಕೂಟ ಬೆಂಬಲ!

Manjula VN

ಬೆಂಗಳೂರು: ನೆರೆ ರಾಜ್ಯ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ನಡೆಸುತ್ತಿದ್ದು, ಬಂದ್‌ಗೆ ರಾಜ್ಯದಲ್ಲಿರುವ ತಮಿಳು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ತಮಿಳು ಸಂಘಟನೆಗಳ ಅಧ್ಯಕ್ಷ ಎಸ್ ಫ್ರಾನ್ಸಿಸ್ ಮಾತನಾಡಿ, ಕರ್ನಾಟಕದಲ್ಲಿ ನೆಲೆಸಿರುವ ತಮಿಳು ಮಾತನಾಡುವ ಜನತೆಗೆ ಬೆಂಬಲ ನೀಡಲು ಮತ್ತು ಬಂದ್‌ನಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಯೇ 15 ಲಕ್ಷಕ್ಕೂ ಹೆಚ್ಚು ತಮಿಳು ಮಾತನಾಡುವ ಜನಸಂಖ್ಯೆಯಿದ್ದು, ಎಲ್ಲರಿಗೂ ಕಾವೇರಿ ನೀರಿನ ಸಮಸ್ಯೆಯ ಬಗ್ಗೆ ಅರಿವಿದೆ. ಇಲ್ಲಿನ ತಮಿಳರಿಗೆ ವಾಸ್ತವತೆ ಗೊತ್ತಿದೆ ಹಾಗಾಗಿ ಬಂದ್‌ಗೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.

ತಮಿಳು-ಕನ್ನಡ ಸೌಹಾರ್ದತೆ ಮತ್ತು ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಎನ್ ರಾಮಚಂದ್ರನ್ ಮಾತನಾಡಿ, ಈ ಹಿಂದೆ ಪ್ರತಿಭಟನೆಯ ಲಾಭ ಪಡೆದುಕೊಳ್ಳುತ್ತಿದ್ದ ಕೆಲ ಸಮಾಜ ವಿರೋಧಿಗಳು ತಮಿಳುಗರನ್ನು ಗುರಿಯಾಗಿಸುತ್ತಿದ್ದರು. ಆದರೆ, ಇದೀಗ ಜನರು ಹೆಚ್ಚು ಪ್ರಬುದ್ಧರಾಗಿದ್ದಾರೆ. ಇಂದು ಯಾರೂ ಹಿಂಸೆಯನ್ನು ಆಶ್ರಯಿಸುವುದಿಲ್ಲ ಎಂದು ಹೇಳಿದರು.

ಈ ನಡುವೆ ಕರ್ನಾಟಕದ ತಮಿಳು ಅಸೋಸಿಯೇಷನ್‌ಗಳು ಮತ್ತು ತಮಿಳು ಮಾತನಾಡುವ ನಿವಾಸಿಗಳು ನೀಡಿರುವ ಬೆಂಬಲವನ್ನು ಕನ್ನಡಿಗರು ಸ್ವಾಗತಿಸಿದ್ದಾರೆ.

ಇಲ್ಲಿನ ತಮಿಳರು ಕೂಡ ಕಾವೇರಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಬಂದ್‌ಗೆ ಅವರ ಬೆಂಬಲವು ತಮಿಳುನಾಡು ಸರ್ಕಾರಕ್ಕೆ ಬಲವಾದ ಸಂದೇಶವನ್ನು ರವಾನಿಸುತ್ತದೆ. ಇದು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

SCROLL FOR NEXT