ಶಾಸಕ ಪ್ರಿಯಕೃಷ್ಣ ಮತ್ತು ಕೃಷ್ಣಪ್ಪ
ಶಾಸಕ ಪ್ರಿಯಕೃಷ್ಣ ಮತ್ತು ಕೃಷ್ಣಪ್ಪ 
ರಾಜ್ಯ

BBMP ಕಚೇರಿಯಲ್ಲಿ ಶಾಸಕ ಪ್ರಿಯಕೃಷ್ಣ, ಎಂ ಕೃಷ್ಣಪ್ಪ ಫೋಟೋ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್!

Srinivasamurthy VN

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಲ ಕಚೇರಿ ಮತ್ತು ಬಿಬಿಎಂಪಿ ಮಾಲೀಕತ್ವದ ಆಡಳಿತಾತ್ಮಕ ಕಟ್ಟಡ, ಉದ್ಯಾನ, ಧ್ಯಾನ ಮಂದಿರ, ಕ್ರೀಡಾಂಗಣದಲ್ಲಿ ಹಾಲಿ ಶಾಸಕರಾದ ಪ್ರಿಯಕೃಷ್ಣ ಮತ್ತು ಎಂ ಕೃಷ್ಣಪ್ಪ ಅವರ ಭಾವಚಿತ್ರಗಳನ್ನು ಹಾಕಲಾಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಬಿಬಿಎಂಪಿ ಮಾಲೀಕತ್ವದ ಕಟ್ಟಡಗಳಲ್ಲಿ ಚುನಾಯಿತ ಪ್ರತಿನಿಧಿಗಳ ಚಿತ್ರ ಪ್ರದರ್ಶಿಸುವುದಕ್ಕೆ ಆಕ್ಷೇಪಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ಗೋವಿಂದರಾಜ ನಗರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಬಿಎಂಪಿ ಅನುದಾನದಲ್ಲಿ ಬಿಬಿಎಂಪಿ ಮಾಲೀಕತ್ವದ ಆಡಳಿತಾತ್ಮಕ ಕಟ್ಟಡ, ಉದ್ಯಾನ, ಧ್ಯಾನ ಮಂದಿರ, ಕ್ರೀಡಾಂಗಣದಲ್ಲಿ ಹಾಲಿ ಶಾಸಕರಾದ ಪ್ರಿಯಕೃಷ್ಣ ಮತ್ತು ಎಂ ಕೃಷ್ಣಪ್ಪ ಅವರ ಚಿತ್ರ ತೆರವು ಮಾಡಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಮೂಡಲಪಾಳ್ಯದ ಶಿವಾನಂದ ನಗರದ ನಿವಾಸಿ ಎಚ್ ಎಂ ಆರ್ತೀಸ್ ಅರ್ಜಿ ಸಲ್ಲಿಸಿದ್ದು, ವಿಚಾರವನ್ನು ಗಮನಕ್ಕೆ ತಂದರೂ ಕ್ರಮಕೈಗೊಳ್ಳದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿಗೆ ನೋಟಿಸ್‌ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಆದೇಶಿಸಿ ಪೀಠವು ವಿಚಾರಣೆ ಮುಂದೂಡಿತು.

ಸುಪ್ರೀಂಕೋರ್ಟ್ ಆದೇಶ

ರಾಷ್ಟ್ರಪತಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಇಲಾಖಾ ಸಚಿವರು ಚಿತ್ರಗಳನ್ನು ಹೊರತುಪಡಿಸಿ, ಸಂಸದರು, ಶಾಸಕರು ಸೇರಿದಂತೆ ಬೇರೆ ಯಾರ ಚಿತ್ರಗಳನ್ನು ಸರ್ಕಾರದ ಕಟ್ಟಡಗಳಲ್ಲಿ ಪ್ರಕಟಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ. ಅದಾಗ್ಯೂ, ಪ್ರಿಯಕೃಷ್ಣ ಮತ್ತು ಕೃಷ್ಣಪ್ಪ ಅವರ ಚಿತ್ರಗಳನ್ನು ಬಿಬಿಎಂಪಿ ವ್ಯಾಪ್ತಿಯ ಕಟ್ಟಡಗಳಲ್ಲಿ ಬಳಕೆ ಮಾಡಿರುವ ವಿಚಾರವನ್ನು ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ. ಅವರಾರೂ ಕ್ರಮಕೈಗೊಂಡಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

SCROLL FOR NEXT