ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ  
ರಾಜ್ಯ

ಸಾಲುಸಾಲು ರಜೆ: ಹೆಚ್ಚುವರಿಯಾಗಿ 2,275 KSRTC ಬಸ್ ವ್ಯವಸ್ಥೆ

Sumana Upadhyaya

ಬೆಂಗಳೂರು: ಯುಗಾದಿ, ರಂಜಾನ್ ಹಬ್ಬದ ಸಾಲುಸಾಲು ರಜೆಗಳಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದ್ದು ಬೆಂಗಳೂರು ನಗರದಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ಧತೆ ನಡೆಸಿರುವ ಜನರಿಗೆ ಹೆಚ್ಚುವರಿ ಬಸ್‍ಗಳನ್ನು ರಸ್ತೆಗಿಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿದ್ಧತೆ ನಡೆಸಿದೆ.

ಒಟ್ಟು 2,275 ವಿಶೇಷ ಬಸ್‍ಗಳನ್ನು ರಸ್ತೆಗಿಳಿಸಲು ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳು ನಿರ್ಧಾರಿಸಿದ್ದು ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಕೆಂಪೇಗೌಡ ನಿಲ್ದಾಣ, ಸ್ಯಾಟ್‍ಲೈಟ್ ನಿಲ್ದಾಣ, ಶಾಂತಿನಗರದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ ಸೇರಿದಂತೆ ಹಲವು ಸ್ಥಳಗಳಿಗೆ ವಿಶೇಷ ಬಸ್ ಸೇವೆ ಮಾಡಲಾಗಿದೆ. ಅಲ್ಲದೇ ನೆರೆರಾಜ್ಯ ಹೈದರಾಬಾದ್, ಚೆನ್ನೈ, ಗೋವಾ ಪಣಜಿ, ಶಿರಡಿ, ಎರ್ನಾಕುಲಂಗೆ ವಿಶೇಷ ಬಸ್ ಸೇವೆ ಇರಲಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಎಸ್‌ಆರ್‌ಟಿಸಿಯಿಂದ 1,750 ಬಸ್, ಎನ್‍ಡಬ್ಲ್ಯೂಕೆಎಸ್‍ಆರ್‌ಟಿಸಿಯ 145 ಬಸ್, ಕೆಕೆಆರ್‌ಟಿಸಿಯ 200 ಬಸ್ ಹಾಗೂ ಬಿಎಂಟಿಸಿಯ 180 ವಿಶೇಷ ಬಸ್‍ಗಳನ್ನು ರಸ್ತೆಗಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹಬ್ಬಗಳು ಹಾಗೂ ವಾರಾಂತ್ಯದ ಕಾರಣ ಏಪ್ರಿಲ್ 7 ರಿಂದ ಏಪ್ರಿಲ್ 14ರ ವರೆಗೆ ಬರೋಬ್ಬರಿ 5 ರಜೆಗಳು ಸಿಗಲಿವೆ. ವಿದ್ಯಾರ್ಥಿಗಳಿಗೆ ಬೇಸಗೆ ರಜೆಯೂ ಆರಂಭವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ ತೆರಳಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಬಸ್ ಸೇವೆ ಒದಗಿಸಲಾಗುತ್ತಿದೆ.

SCROLL FOR NEXT