ಡಿಕೆ ಶಿವಕುಮಾರ್ - ಎಚ್‌ಡಿ ಕುಮಾರಸ್ವಾಮಿ 
ರಾಜ್ಯ

ಮೇಕೆದಾಟು ವಿವಾದ: ಅಧಿಕಾರದಲ್ಲಿದ್ದಾಗಲೇ ಏನೂ ಮಾಡಿಲ್ಲ ಎಂದ ಡಿಕೆ ಶಿವಕುಮಾರ್ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ

ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಮೇಕೆದಾಟು, ಮಹದಾಯಿ ಯೋಜನೆ ವಿಚಾರವಾಗಿ ಏನನ್ನೂ ಮಾಡಿಲ್ಲ, ಈಗ ಏನು ಮಾಡುತ್ತಾರೆ ಎಂದಿರುವ ಡಿಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು: ಅಧಿಕಾರ ಇರುವುದು ನಿಮ್ಮ ಕೈಯಲ್ಲಿ. ಜನ ಪೆನ್ನು-ಪೇಪರ್ ಕೊಟ್ಟಿರುವುದೂ ನಿಮಗೆ. ಕೆಲಸ ಮಾಡಿ ಎಂದರೆ ಹಳೆಯದನ್ನು ಕೆದಕುತ್ತಿದ್ದೀರಿ, ಏಕೆ?. ಜನರು ಕೊಟ್ಟ ಪೆನ್ನು-ಪೇಪರ್ ಹಿಡಿದುಕೊಳ್ಳುವ ನಿಮ್ಮ ಶಕ್ತಿ ಕೇವಲ ಹತ್ತೇ ತಿಂಗಳಿಗೆ ನಿಸ್ತೇಜವಾಯಿತೇ? ಕೈಲಾಗದೆ ಮೈ ಪರಚಿಕೊಳ್ಳುವುದು ಎಂದರೆ ಇದೆ ಅಲ್ಲವೇ? ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಅಧಿಕಾರ ಇದ್ದಾಗಲೇ ಕುಮಾರಸ್ವಾಮಿ ಅವರು ಮೇಕೆದಾಟು ವಿಚಾರವಾಗಿ ಏನನ್ನೂ ಮಾಡಲಿಲ್ಲ ಎಂದಿದ್ದೀರಿ!. ಕುಮಾರಸ್ವಾಮಿ ಏನೂ ಮಾಡಿಯೇ ಇಲ್ಲವೆಂದು ಕಟ್ಟುಕಥೆ ಕಟ್ಟಿದ್ದೀರಿ. ಎಷ್ಟಾದರೂ ನೀವು ಸುಳ್ಳು ಫ್ಯಾಕ್ಟರಿಯ ಮೇಟಿ! ಮೇಕೆದಾಟುಗಾಗಿ ನಾನು ಏನೆಲ್ಲ ಮಾಡಿದೆ ಎನ್ನುವುದು ನಿಮಗೇಗೆ ಗೊತ್ತಾದೀತು? ಸತ್ಯಕ್ಕೂ ನಿಮಗೂ ಎಣ್ಣೆ ಶೀಗೇಕಾಯಿ ಸಂಬಂಧ! ಹೌದಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, ಮೇಕೆದಾಟು ನಿರ್ಮಾಣಕ್ಕೆ 2018-19ರಲ್ಲೇ ಸಮಗ್ರ ಯೋಜನಾ ವರದಿ (ಡಿಪಿಆರ್) ಅನ್ನು ಕೇಂದ್ರಕ್ಕೆ ಸಲ್ಲಿಸಿದ್ದು ಅಂದಿನ ನನ್ನ ಸರ್ಕಾರ. ಆ ಸರ್ಕಾರದಲ್ಲಿ ನೀವು ಸಚಿವರಾಗಿದ್ದಿರಿ. ಈ ಮಾಹಿತಿಯೇ ನಿಮಗಿಲ್ಲವೆಂದರೆ ಹೇಗೆ? ಇದೆಂಥಾ ಹತವಿಧಿ!? ಹಾಗಾದರೆ, ಜನರು ಕೊಟ್ಟ ಪೆನ್ನು-ಪೇಪರ್ ಗತಿ ಏನು? ಎಂದಿದ್ದಾರೆ.

2006-2007ರಲ್ಲೇ ಮಹದಾಯಿ ಯೋಜನೆಗೆ ಸಂಪುಟದಲ್ಲಿಯೇ ಒಪ್ಪಿಗೆ ನೀಡಿ, 100 ಕೋಟಿ ರೂ. ಮಂಜೂರು ಮಾಡಿ ಆಗಲೇ ಶಂಕುಸ್ಥಾಪನೆಯನ್ನೂ ನೆರವೇರಿಸಲಾಯಿತು. ಆಮೇಲೆ 5 ವರ್ಷ ನಿಮ್ಮದೇ ಕಾಂಗ್ರೆಸ್ ಸರ್ಕಾರ ಇತ್ತಲ್ಲಾ..? ಏನ್ ಮಾಡ್ತಾ ಇದ್ದಿರಿ ಶಿವಕುಮಾರ್ ಅವರೇ? ಆಗ ಯಾಕೆ ತಾವು ನುಡಿದಂತೆ ನಡೆಯಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೇಕೆದಾಟು, ಮಹದಾಯಿ ಸೇರಿ ರಾಜ್ಯದ ನೀರಾವರಿ ಯೋಜನೆಗಳಿಗಾಗಿ ನಾನು ಮುಖ್ಯಮಂತ್ರಿಯಾಗಿ ಆಯಾ ಇಲಾಖೆಯ ಕೇಂದ್ರ ಸಚಿವರನ್ನು ಎಷ್ಟು ಸಲ ಭೇಟಿಯಾಗಿದ್ದೆ ಎನ್ನುವ ಮಾಹಿತಿಯೂ ನಿಮಗಿಲ್ಲವಲ್ಲ? ನಿತಿನ್ ಗಡ್ಕರಿ ಅವರೊಬ್ಬರನ್ನೇ ನಾನು 10 ಸಲ ಭೇಟಿಯಾಗಿದ್ದೆ ಎಂದು ತಿಳಿಸಿದ್ದಾರೆ.

90ರ ಇಳಿವಯಸ್ಸಿನಲ್ಲಿಯೂ ದೇವೇಗೌಡರು ಸಂಸತ್ತಿನ ಒಳ-ಹೊರಗೆ ರಾಜ್ಯಕ್ಕಾಗಿ ಅವಿರತವಾಗಿ ಹೋರಾಡುತ್ತಿದ್ದಾರೆ. ಸಂಸತ್ ಅಧಿವೇಶನದಲ್ಲಿ ಅವರು ಮೇಕೆದಾಟು ಬಗ್ಗೆ ಧ್ವನಿ ಎತ್ತಿದರೆ, ರಾಜ್ಯದವರೇ ಆದ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮೌನವ್ರತ ಮಾಡುತ್ತಿದ್ದರು. ನಿಮ್ಮ ಪಕ್ಷದ ಉಳಿದ ಸದಸ್ಯರು ನಿಮ್ಮ ಅಧ್ಯಕ್ಷರು ಮಾಡಿದ್ದನ್ನೇ ಚಾಚೂ ತಪ್ಪದೇ ಪಾಲಿಸುತ್ತಿದ್ದರು ಎಂದು ದೂರಿದ್ದಾರೆ.

ಕಾಂಗ್ರೆಸ್, ಡಿಎಂಕೆ ಅಣ್ತಮ್ಮ ಪಕ್ಷಗಳಲ್ಲವೇ? ಮೇಕೆದಾಟು ಮಾಡಲು ಕರ್ನಾಟಕದವರಿಗೆ ಬಿಡೋದೇ ಇಲ್ಲ ಎಂದು ಡಿಎಂಕೆ ಚುನಾವಣೆ ಪ್ರಣಾಳಿಕೆಯಲ್ಲೇ ಘೋಷಣೆ ಮಾಡಿದೆ. ಇದಕ್ಕೂ ನಿಮ್ಮದು, ನಿಮ್ಮ ಪಕ್ಷದ್ದು 'ಮೌನಂ ಶರಣಂ ಗಚ್ಛಾಮಿ!'. ನಿಮ್ಮ ಸರ್ಕಾರದಲ್ಲಿ ಏನೇನ್ ನಡೀತಿದೆ ಶಿವಕುಮಾರ್ ಅವರೇ? ಪೆನ್ನು ಪೇಪರ್ ಕೂಡ 'ಮೌನಂ ಶರಣಂ ಗಚ್ಛಾಮಿ' ಎನ್ನುತ್ತಿವೆಯಾ.. ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್ ಹೇಳಿದ್ದೇನು?

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಅಪಾರ್ಟ್ಮೆಂಟ್ ನಿವಾಸಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಇಲ್ಲಿನ ಜನರ ಕಷ್ಟಕ್ಕೆ ಪರಿಹಾರ ನೀಡಿ ಧೈರ್ಯ ತುಂಬುವವರು ನಾವು. ಬೇರೆ ಅಭ್ಯರ್ಥಿಗಳು ನಮ್ಮಂತೆ ಜನರಿಗೆ ಅಭಯ ನೀಡುವುದಿಲ್ಲ. ಕುಮಾರಸ್ವಾಮಿ ಅವರು ಈಗ ಮೇಕೆದಾಟು, ಮಹದಾಯಿ ಯೋಜನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಧಿಕಾರ ಇದ್ದಾಗ ಈ ವಿಚಾರದಲ್ಲಿ ಏನೂ ಮಾಡದವರು ಈಗ ಏನು ಮಾಡುತ್ತಾರೆ. ನಾನು ಮೇಕೆದಾಟು ಪಾದಯಾತ್ರೆ ಮಾಡುವಾಗ ಕಬಾಬ್ ತಿನ್ನೋಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದಿದ್ದರು. ಈಗ ಮತ್ತೆ ಪಾದಯಾತ್ರೆ ಬಗ್ಗೆ ಮಾತನಾಡುತ್ತಿದ್ದಾರೆ. ಮಂಡ್ಯಕ್ಕೆ ಬಂದ ನಂತರ ಅವರಿಗೆ ಬಿಸಿ ತಟ್ಟಿರುವಂತೆ ಕಾಣುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT