ಬೆಂಗಳೂರು: ಈಗ ಲೋಕಸಭೆ ಚುನಾವಣೆಯ ಹೊತ್ತು. ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿರುತ್ತಾರೆ. ಯುಗಾದಿ ಹಬ್ಬದ ದಿನವಾದ ಇಂದು ರಾಜ್ಯ ಬಿಜೆಪಿಯು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯುಗಾದಿ ಹಬ್ಬದ ಶುಭಾಶಯವನ್ನು ಕೋರಿದೆ. ಜೊತೆಗೆ ಇನ್ನಾದರೂ ಭಗವಂತ ಅವರಿಗೆ ಸದ್ಭುದ್ಧಿ ಕೊಡಲಿ ಎಂದು ವ್ಯಂಗಭರಿತವಾಗಿ ಟ್ವೀಟ್ ಮಾಡಿದೆ.
ಕರ್ವಾಟಕ ಬಿಜೆಪಿಯ ಅಧಿಕೃತ ಟ್ವಿಟ್ಟರ್ ಈ ಪೋಸ್ಟ್ ಹಾಕಲಾಗಿದ್ದು ಅರಾಜಕತೆ, ತಮಿಳುನಾಡಿಗೆ ಕಾವೇರಿ ನೀರು, ಸುಳ್ಳು ಆರೋಪ, ರೈತರಿಗೆ ಬರ ಪರಿಹಾರ, ಮಹಿಳೆಯರ ರಕ್ಷಣೆ, ಭಯೋತ್ಪಾದನೆ ನಿಗ್ರಹ, ಬಡವರ ಪರ, ಕನ್ನಡಿಗರ ತೆರಿಗೆ ಹಣ, ಸಂಸ್ಕಾರವಂತ ನಾಲಿಗೆ, ಜಾತಿ ಧರ್ಮಗಳ ನಡುವೆ ಕಲಹ ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲೆಳೆದಿದೆ.
ಪೋಸ್ಟ್ ನಲ್ಲಿ ಏನಿದೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯುಗಾದಿ ಹಬ್ಬದ ಶುಭಾಶಯಗಳು. ಹಳೆಯ ಎಲೆ ಉದುರಿ ಹೊಸ ಚಿಗುರು ಮೂಡುವ ಸಮಯ ಬಂದಿದೆ. ಇನ್ನಾದರೂ ಭಗವಂತ ಅವರಿಗೆ ಸದ್ಬುದ್ಧಿ ಕರುಣಿಸಿ ಈ ಬದಲಾವಣೆ ತರಲೆಂದು ವಿಘ್ನ ವಿನಾಶಕ ವಿನಾಯಕನಲ್ಲಿ ಕರುನಾಡು ಮೊರೆಯಿಡುತ್ತಿದೆ.
ಅರಾಜಕತೆಯನ್ನು ಹೋಗಲಾಡಿಸುವ ಬುದ್ಧಿ ನೀಡಲಿ
ಕಾವೇರಿಯನ್ನು ತಮಿಳುನಾಡಿಗೆ ಹರಿಸದೆ ಕನ್ನಡಿಗರ ಹಿತಾಸಕ್ತಿ ಕಾಪಾಡುವ ಸ್ಥೈರ್ಯ ತೋರಿಸಲಿ
ಸುಳ್ಳು ಹೇಳುವುದನ್ನು ಕಡಿಮೆ ಮಾಡುವ ಜ್ಞಾನ ನೀಡಲಿ
ರೈತರಿಗೆ ಬರ ಪರಿಹಾರ ನೀಡುವಂತಹ ಗುಣ ಕರುಣಿಸಲಿ
ಮಹಿಳೆಯರ ರಕ್ಷಣೆ ಮಾಡುವ ಹೊಣೆ ಹೊರುವಂತಾಗಲಿ
ಭಯೋತ್ಪಾದಕರನ್ನು ಹತ್ತಿಕ್ಕುವ ಧೈರ್ಯ ತುಂಬಲಿ
ಬಡವರ ಮೇಲೆ ಮಮಕಾರ ತೋರುವ ಮಾನವೀಯತೆ ದೊರೆಯಲಿ
ಮೋಜು ಮಾಡದೆ ಕನ್ನಡಿಗರ ತೆರಿಗೆ ಹಣ ಉಳಿಸುವ ಜವಾಬ್ದಾರಿ ತೋರಲಿ
ನಾಲಿಗೆ ಹರಿಬಿಡದೆ ಗೌರವ ನೀಡುವ ಸಂಸ್ಕಾರ ಸಿಗುವಂತಾಗಲಿ
ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಬಿಡುವ ಸದ್ಗುಣ ನೀಡಲಿ
ಸತ್ಯ ಹರಿಶ್ಚಂದ್ರನ ಅವತಾರ ಸಿದ್ದರಾಮಯ್ಯನವರೇ ಕನ್ನಡಿಗರ ತೆರಿಗೆ ಹಣ ಯಾರ ಜೇಬು ಪಾಲು?: ಬಿಜೆಪಿ ಸವಾಲು
ಇಷ್ಟು ಬುದ್ಧಿಯನ್ನು ಆ ಭಗವಂತ ಕರುಣಿಸಿಬಿಟ್ಟರೆ, ಸಮೃದ್ಧವಾಗಿ ಕಾಲಕಾಲಕ್ಕೆ ಮಳೆ-ಬೆಳೆಯಾಗಿ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಲಿದೆ.'' ಎಂದು ಪೋಸ್ಚ್ ನಲ್ಲಿ ಬರೆಯಲಾಗಿದೆ.