ಸಂಗ್ರಹ ಚಿತ್ರ
ರಾಜ್ಯ

ಬಿಜೆಪಿ ಸಭೆಯಲ್ಲಿ ಗದ್ದಲ ಸೃಷ್ಟಿಸಿದ ಆರೋಪ: ಸೌಮ್ಯಾ ರೆಡ್ಡಿ, ಮತ್ತಿತರರ ವಿರುದ್ಧ ದೂರು ದಾಖಲು!

ಗುರುರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ಗಳ ಠೇವಣಿದಾರರ ಸಭೆಯಲ್ಲಿ ಗದ್ದಲ ಎಬ್ಬಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಹಾಗೂ ಅವರ ಬೆಂಬಲಿಗರ ವಿರುದ್ಧ ಆಯೋಜಕರು ದೂರು ದಾಖಲಿಸಿದ್ದಾರೆ.

ಬೆಂಗಳೂರು: ಗುರುರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ಗಳ ಠೇವಣಿದಾರರ ಸಭೆಯಲ್ಲಿ ಗದ್ದಲ ಎಬ್ಬಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಹಾಗೂ ಅವರ ಬೆಂಬಲಿಗರ ವಿರುದ್ಧ ಆಯೋಜಕರು ದೂರು ದಾಖಲಿಸಿದ್ದಾರೆ.

ಲೋಕಸಭಾ ಚುನಾವಣಾ ಹಿನ್ನೆಲೆ ಏಪ್ರಿಲ್‌ 13ರಂದು ಗುರುರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ಗಳ ಠೇವಣಿದಾರರ ಸಭೆಯನ್ನು ಕರೆದಿದ್ದು, ಈ ವೇಳೆ ಸಂಸದ ತೇಜಸ್ವಿ ಸೂರ್ಯ ಹಣ ಕಳೆದುಕೊಂಡ ಠೇವಣಿದಾರರ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.

ಕಾರ್ಯಕ್ರಮವೊಂದರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಗಲಾಟೆ ಸೃಷ್ಟಿಸಿ, ಗಲಾಟೆ ಮಾಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ, ಕಾಂಗ್ರೆಸ್ ಪಕ್ಷದ ಬೆಂಬಲಿಗರೇ ಸಭೆಯಲ್ಲಿ ಠೇವಣಿದಾರರಾಗಿ ಕಾಣಿಸಿಕೊಂಡು ಗದ್ದಲ ಸೃಷ್ಟಿಸಿದ್ದಾರೆಂದು ಸಭೆಯ ಆಯೋಜಕರು ಹೇಳಿದ್ದಾರೆ.

ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಸಭೆಯ ಆಯೋಜಕರು, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ, ಲಕ್ಷ್ಮಿ ಮಂಜುಳಾ ಮತ್ತು ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಮತ್ತು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಸಭೆಗೆ ಆಹ್ವಾನ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ವ್ಯಕ್ತಿಗಳು ಬಲವಂತವಾಗಿ ಸಭೆಗೆ ಹಾಜರಾಗಿ, ಗದ್ದಲ ಸೃಷ್ಟಿಸಿದ್ದಾರ. ಲಕ್ಷ್ಮಿ ಮಂಜುಳಾ ನೇತೃತ್ವದ ತಂಡ ಸ್ಥಳದಲ್ಲಿ ಹಿಂಸಾತ್ಮಕ ವರ್ತನೆ ತೋರಿತ್ತು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಸೇರಿದಂತೆ ಹಾಜರಿದ್ದವರನ್ನು ತಳ್ಳಾಡಿದ್ದರು, ಇದರಿಂದ ಸ್ಥಳದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಇದು ಪೂರ್ವಯೋಜಿತ ಕೃತ್ಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ಸಂಬಂಧ ಸ್ಪಷ್ಟನೆ ನೀಡಿದ್ದ ತೇಜಸ್ವಿ ಸೂರ್ಯ ಅವರು, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಕಾಂಗ್ರೆಸ್ ನ ನೀಚ, ಕ್ಷುಲ್ಲಕ ರಾಜಕಾರಣದ 'ಕೈ' ಚಳಕ ಒಮ್ಮೆ ನೋಡಿ. ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಗೆ ಗೆಲುವು ಹಗಲುಗನಸು, ಕೇವಲ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ನಡೆಸಿರುವ ಪಿತೂರಿಯ ಹಿಂದಿರುವ ಕಾಣದ 'ಕೈ' ಗಳು, ಅತೃಪ್ತ ಆತ್ಮಗಳು ನಡೆಸುತ್ತಿರುವ ಸಂಚಿಗೆ ಬೆಂಗಳೂರು ದಕ್ಷಿಣದ ಮತದಾರರು ಈ ಚುನಾವಣೆಯಲ್ಲಿ ಮುಟ್ಟಿ ನೋಡಿಕೊಳ್ಳುವ ರೀತಿಯ ಉತ್ತರ ನೀಡಲಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿರುವಂತೆ ಹತಾಶ, ಹೀನಾಯ ಸ್ಥಿತಿಗೆ ತಲುಪಿರುವ ಕಾಂಗ್ರೆಸ್ ಪಕ್ಷವು ಜನರನ್ನು ದಾರಿತಪ್ಪಿಸುವ, ತನ್ನ ಸುಳ್ಳಿನ ಫ್ಯಾಕ್ಟರಿಯ ಉತ್ಪನ್ನಗಳನ್ನು ದಿನೇದಿನೇ ಬಿಡುಗಡೆಗೊಳಿಸುತ್ತಿರುವುದು ಆ ಪಕ್ಷ ತಲುಪಿರುವ ಹೀನಾಯ ಸ್ಥಿತಿಯ ಪ್ರತಿಬಿಂಬ. ದಿನಾಂಕ 13.04.2024 ರಂದು ನಡೆದ ಸಭೆಯಲ್ಲಿ ಉದ್ದೇಶಪೂರ್ವಕವಾಗಿಯೇ ಜನರನ್ನು ಕಳುಹಿಸಿ ದಾಂಧಲೆ ಎಬ್ಬಿಸಲು ಕಾಂಗ್ರೆಸ್ ಪಕ್ಷವು ನಡೆಸಿದ ಪಿತೂರಿ ಸಾಕ್ಷಿ ಸಮೇತ ಬಯಲಾಗಿದೆ.

ಬೆಂಗಳೂರು ದಕ್ಷಿಣದಲ್ಲಿ ಮತದಾರರನ್ನು ಹಣಬಲದಿಂದ ಕೊಳ್ಳುವ, ತೋಳ್ಬಲ ದಿಂದ ಬೆದರಿಸುವ ಪ್ರಯತ್ನ ನಿರಂತರ ಜಾರಿಯಲ್ಲಿದೆ. 2 ದಿನಗಳ ಹಿಂದಷ್ಟೇ ಜಯನಗರದಲ್ಲಿ ಸಿಕ್ಕಿಬಿದ್ದಿರುವ ಅಕ್ರಮ ಹಣ ಕಾಂಗ್ರೆಸ್ ನದ್ದು, ಮುಖ್ಯಮಂತ್ರಿಗಳ ಸಮಾವೇಶದಲ್ಲಿಯೇ ಗನ್ ಹಿಡಿದುಕೊಂಡು ತೋಳ್ಬಲದ ಪ್ರದರ್ಶನ ಕೂಡ ನಡೆದಿದೆ. ಮುಂದುವರೆದಂತೆ ಕಾಂಗ್ರೆಸ್ ನ ಕೆಲವರು ಬಿಜೆಪಿಯ ಸಭೆಗಳಲ್ಲಿ ದಾಂಧಲೆ ಎಬ್ಬಿಸುವ ವ್ಯವಸ್ಥಿತ ಸಂಚು ನಡೆಸುತ್ತಿರುವುದು ಆ ಪಕ್ಷದ ಹತಾಶೆಗೆ ಸಾಕ್ಷಿ.

ಬೆಂಗಳೂರು ದಕ್ಷಿಣದ ಜನತೆ ಪ್ರಜ್ಞಾವಂತರು. ದೇಶ ಮೊದಲು ಎಂಬ ಘನತೆಯನ್ನು ಕಾಯ್ದುಕೊಂಡು ಬಂದವರು. ಇದೇ ಏಪ್ರಿಲ್ 26 ರಂದು ನಡೆಯಲಿರುವ ಮತದಾನದಲ್ಲಿ ಕಾಂಗ್ರೆಸ್ ನ ಇಂತಹ ನೀಚ, ಕ್ಷುಲ್ಲಕ ರಾಜಕಾರಣಕ್ಕೆ ತಕ್ಕ ಮಟ್ಟದ ಉತ್ತರ ನೀಡಲಿದ್ದಾರೆ. ಮೋದಿಯವರನ್ನು 3ನೇ ಬಾರಿಗೆ ಪ್ರಧಾನಿಯನ್ನಾಗಿ ಆಯ್ಕೆಗೊಳಿಸುವ ಮೂಲಕ , ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ವಿಜಯ ತಂದುಕೊಡಲಿರುವುದು ನಿಶ್ಚಿತ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT