ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ವೋಟ್ ಫ್ರಂ ಹೋಮ್: ಬೆಂಗಳೂರಿನಲ್ಲಿ ಶೇ. 94.49 ರಷ್ಟು ಮತದಾನ, ಪಟ್ಟಿಯಲ್ಲಿದ್ದ 81 ಮಂದಿ ನಿಧನ!

Manjula VN

ಬೆಂಗಳೂರು: 2024 ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟ ಮತದಾರರು ಹಾಗೂ ಶೇಕಡ 40ಕ್ಕೂ ಹೆಚ್ಚು ವಿಕಲಾಂಗತೆ ಹೊಂದಿರುವ ದಿವ್ಯಾಂಗ ಮತದಾರರು ಮನೆಯಿಂದಲೇ ಮತದಾನ ಮಾಡುವ ಅಪೂರ್ವ ಅವಕಾಶ ಕಲ್ಪಿಸಲಾಗಿತ್ತು. ಈ ಪ್ರಕ್ರಿಯೆಯು ಬೆಂಗಳೂರಿನಲ್ಲಿ ಸುಸೂತ್ರವಾಗಿ ನಡೆದಿದ್ದು, ಒಟ್ಟಾರೆ ಶೇಕಡ 94.49 ಪ್ರತಿಶತ ಮತದಾನವಾಗಿದೆ.

ಚುನಾವಣಾಧಿಕಾರಿಗಳ ದಾಖಲೆಗಳ ಪ್ರಕಾರ, 6,407 ಮತದಾರರಲ್ಲಿ - 6.206 ಹಿರಿಯ ನಾಗರಿಕರು ಮತ್ತು 201 ವಿಶೇಷ ಸಾಮರ್ಥ್ಯ ಹೊಂದಿರುವ ಮತದಾರರಿದ್ದು, 6,054 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆಂದು ಹೇಳಿದೆ.

ಭಾರತೀಯ ಚುನಾವಣಾ ಆಯೋಗದ ನಮೂನೆ 12 ರ ಅಡಿಯಲ್ಲಿ ನೋಂದಾಯಿಸಿದ 81 ಮತದಾರರು ನಿಧನರಾಗಿದ್ದರೆ, ಅಧಿಕಾರಿಗಳು ಅವರ ಮನೆಗೆ ತಲುಪಿದಾಗ 230 ಲಭ್ಯವಿರಲಿಲ್ಲ ಮತ್ತು ಗೈರುಹಾಜರಾಗಿದ್ದರು, ಮತ್ತು 42 ಮಂದಿ ಮನೆಯಲ್ಲಿದ್ದರೂ ಮತದಾನ ಮಾಡಲಿಲ್ಲ ಎಂದು ತಿಳಿಸಿದೆ.

ಬೆಂಗಳೂರು ದಕ್ಷಿಣ ಶೇ 95.56 ಮತದಾನದೊಂದಿಗೆ ಅಗ್ರಸ್ಥಾನದಲ್ಲಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಸೆಂಟ್ರಲ್‌ನಲ್ಲಿ 1,822 ಮತದಾರರ ಪೈಕಿ 1,720 ಮಂದಿ (94.40 ರಷ್ಟು) ಮತದಾನ ಮಾಡಿದ್ದಾರೆ. ಬೆಂಗಳೂರು ಉತ್ತರದಲ್ಲಿ 2,062 ಮತದಾರರ ಪೈಕಿ 1,923 ಮತದಾರರು (ಶೇ.93.26) ತಮ್ಮ ಹಕ್ಕು ಚಲಾಯಿಸಿದ್ದಾರೆ.

ಇನ್ನು ದಕ್ಷಿಣ ಕನ್ನಡದಲ್ಲಿ ಶೇ.97.47ರಷ್ಟು ಮತದಾನವಾಗಿದೆ .ಜಿಲ್ಲೆಯಲ್ಲಿ 8,010 ಮತದಾರರು ನೋಂದಣಿಯಾಗಿದ್ದರು. ಆ ಪೈಕಿ ಒಟ್ಟು 7,807 ಮಂದಿ ಅಂಚೆ ಪತ್ರದ ಮೂಲಕ ಮತ ಚಲಾಯಿಸಿದ್ದಾರೆ.

ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ ಒಟ್ಟು 6,053 ಮತದಾರರ ಪೈಕಿ 5,878 ಮಂದಿ ಮತ ಚಲಾಯಿಸಿದ್ದಾರೆ. ಶೇ.40% ಕ್ಕಿಂತ ಮೇಲ್ಪಟ್ಟು ಅಂಗವೈಕಲ್ಯ ಹೊಂದಿರುವ 1,957 ಮತದಾರರಲ್ಲಿ ಒಟ್ಟು 1,929 ವಿಶೇಷಚೇತನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಉಳಿದ 203 ಮತದಾರರ ಪೈಕಿ 66 ಜನ ಈಗಾಗಲೇ ಮರಣ ಹೊಂದಿದ್ದು, 136 ಜನ ಅರ್ಹ ಮತದಾರರು ಎರಡನೇ ಭೇಟಿಯಲ್ಲಿಯೂ ಮತದಾನ ಮಾಡಿರುವುದಿಲ್ಲ. ಓರ್ವ ಮತದಾರ ಮತ ಚಲಾಯಿಸಲು ನಿರಾಕರಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

SCROLL FOR NEXT