ಸಾಂಕೇತಿಕ ಚಿತ್ರ online desk
ರಾಜ್ಯ

ಲೋಕಸಭೆ ಚುನಾವಣೆ 2024 ಬಹಿರಂಗ ಪ್ರಚಾರ ಅಂತ್ಯ, voting ದಿನ ಮೆಟ್ರೋ ಅವಧಿ ವಿಸ್ತರಣೆ; ನೇಹಾ ಕೇಸ್: CID ವಶಕ್ಕೆ ಆರೋಪಿ: ಈ ದಿನದ ಸುದ್ದಿ ಮುಖ್ಯಾಂಶಗಳು 24-04-2024

#loksabhaelection2024 ಬಹಿರಂಗ ಪ್ರಚಾರ ಅಂತ್ಯ

ರಾಜ್ಯದಲ್ಲಿ ಮೊದಲ ಹಂತದಲ್ಲಿ ಏಪ್ರಿಲ್‌ 26 ರಂದು ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಗುರುವಾರ ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಮಾತ್ರ ಅವಕಾಶವಿದೆ. ಮೊಬೈಲ್ ಫೋನ್‌ಗಳನ್ನು ಮತಗಟ್ಟೆಗಳಿಗೆ ಕೊಂಡೊಯ್ಯುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಬೂತ್‌ಗಳಿಗೆ ಹೋಗುವ ಜನರನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ CEO ಮನೋಜ್ ಕುಮಾರ್ ಮೀನಾ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳನ್ನು ವೆಬ್‌ಕಾಸ್ಟ್ ಮಾಡಲಾಗುವುದು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಮತ್ತು ವೀಕ್ಷಕರ ಕೋರಿಕೆಯಂತೆ ಈ ಕ್ಷೇತ್ರದಲ್ಲಿ ಎರಡು ಪಟ್ಟು ಅರೆಸೇನಾಪಡೆ ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

voting ದಿನ ಮೆಟ್ರೋ ಅವಧಿ ವಿಸ್ತರಣೆ

ಲೋಕಸಭಾ ಚುನಾವಣೆ 2024ರ ಮತದಾನ ದಿನದ ಹಿನ್ನಲೆಯಲ್ಲಿ ಏಪ್ರಿಲ್‌ 26 ರಂದು ಬೆಂಗಳೂರು ನಮ್ಮ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ. ಏಪ್ರಿಲ್ 26ರಂದು ನಮ್ಮ ಮೆಟ್ರೋದ ಎಲ್ಲಾ ನಾಲ್ಕು ಟರ್ಮಿನಲ್ ಗಳಿಂದ ಕೊನೆಯ ರೈಲು ಸೇವೆಯನ್ನು ರಾತ್ರಿ 12.35 ವರೆಗೂ ವಿಸ್ತರಿಸಲಾಗಿದೆ. ಎಲ್ಲಾ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ನಮ್ಮ ಮೆಟ್ರೋ ಕೋರಿದೆ. ಮತದಾನದ ಹಿನ್ನೆಲೆ ಏಪ್ರಿಲ್ 26 ಹಾಗೂ ಮೇ.07 ರಂದು ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದೆ.

ನೇಹಾ ಕೇಸ್:CID ವಶಕ್ಕೆ ಆರೋಪಿ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ಆರೋಪಿ ಫಯಾಜ್ ನನ್ನು 6 ದಿನಗಳ ಕಾಲ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಸಿಐಡಿಯ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ನಿನ್ನೆ ತನಿಖೆ ಆರಂಭವಾಗಿದೆ. ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಆರೋಪಿಯನ್ನು 14 ದಿನ ತಮ್ಮ ವಶಕ್ಕೆ ನೀಡುವಂತೆ ಇಲ್ಲಿನ ಒಂದನೇ ಜೆಎಂಎಫ್ ಸಿ ಕೋರ್ಟ್ ಗೆ ಸಿಐಡಿ ಅರ್ಜಿ ಸಲ್ಲಿಸಿತ್ತು. ಈಮಧ್ಯೆ, ಬಿವಿಪಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ವತಿಯಿಂದ(NSUI) ವಿದ್ಯಾರ್ಥಿಗಳು ಬುಧವಾರ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.

ಚುನಾವಣಾ ಪ್ರಚಾರದಲ್ಲಿ ನಾಯಕರ ನಡುವೆ  TalkWar

ಚುನಾವಣಾ ಪ್ರಚಾರಕ್ಕೆ ಇಂದು ತೆರೆ ಬಿದ್ದಿದ್ದು ಕೊನೆ ಕ್ಷಣದಲ್ಲಿ ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ ನಡೆಸಿದರು. ವಿರಾಜಪೇಟೆ ಮತ್ತು ಮಡಿಕೇರಿಯಲ್ಲಿ ಮೈಸೂರು-ಕೊಡಗು ಎನ್ ಡಿಎ ಅಭ್ಯರ್ಥಿ ಯದುವೀರ್ ಒಡೆಯರ್ ಭರ್ಜರಿ ರೋಡ್ ಶೋ ನಡೆಸಿದರೆ, ಮಂಡ್ಯದಲ್ಲಿ ಹೆಚ್ ಡಿ ಕುಮಾರಸ್ವಾಮಿ ವಕೀಲರ ಸಂಘಕ್ಕೆ ತೆರಳಿ ಪ್ರಚಾರ ನಡೆಸಿದರು. ಶಿವಮೊಗ್ಗದಲ್ಲಿ ಪುತ್ರ ಬಿವೈ ರಾಘವೇಂದ್ರ ಪರ ಯಡಿಯೂರಪ್ಪ ಪ್ರಚಾರ ನಡೆಸಿದರೆ, ಬಿಜೆಪಿಯ ಬಂಡಾಯ ಅಭ್ಯರ್ಥಿ ಈಶ್ವರಪ್ಪ ಸಹ ತಮ್ಮ ಬೆಂಬಲಿಗರೊಂದಿಗೆ ಪ್ರಚಾರದಲ್ಲಿ ತೊಡಗಿದ್ದರು. ಮತ್ತೊಂದೆಡೆ, ರಾಹುಲ್ ಗಾಂಧಿ ವಿರುದ್ಧ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪ್ರಣಾಳಿಕೆಗಳನ್ನು ಟೀಕಿಸಿದ್ದಾರೆ. ಯಾವುದೇ ಕಾರಣಕ್ಕೂ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂದು ಖಚಿತವಾಗಿರುವ ಪಕ್ಷ ಮಾತ್ರ ಈ ರೀತಿ ಅನೇಕ ಭರವಸೆಗಳನ್ನು ನೀಡಬಲ್ಲದು.

ಕೇಂದ್ರ ಸಚಿವ ಸಂಪುಟಕ್ಕೆ ತಮ್ಮ ಅಳಿಯ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ಸುಕರಾಗಿದ್ದಾರೆ. ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ತಾವು ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ.

ಹಿರಿಯ ಪತ್ರಕರ್ತ ಅರ್ಜುನ್ ದೇವ ನಿಧನ, ಸಿಎಂ ಸಿದ್ದರಾಮಯ್ಯ ಸಂತಾಪ 

ಹಿರಿಯ ಪತ್ರಕರ್ತ ಅರ್ಜುನ್ ದೇವ ಅವರು ಕೆಂಗೇರಿ ಉಪನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅರ್ಜುನ್ ದೇವ ಅವರು 'ಪ್ರಜಾವಾಣಿ', ತಾಯಿನಾಡು, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ಸೂರ್ಯೋದಯ ಪತ್ರಿಕೆಯ ಸಂಪಾದಕರಾಗಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅರ್ಜುನ್‌ ದೇವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಕೆಪಿ ನಂಜುಂಡಿ

ವಿಶ್ವಕರ್ಮ ಸಮಾಜದ ಮುಖಂಡ ಕೆ.ಪಿ. ನಂಜುಂಡಿ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜುಂಡಿ, ಬಿಜೆಪಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಸಾಮರ್ಥ್ಯ ಆಧರಿಸಿ ಜವಾಬ್ದಾರಿ, ಸ್ಥಾನ ಕೊಡಲಿಲಿಲ್ಲ, ಇದರಿಂದ ಬೇಸರಗೊಂಡು ಪರಿಷತ್ತಿನ ಸದಸ್ಯಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT