ಕರ್ನಾಟಕ ಹೈಕೋರ್ಟ್ 
ರಾಜ್ಯ

ಮೈಸೂರು ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರ್ಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ ನಾಡಗೀತೆ ಹಾಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ.

ಬೆಂಗಳೂರು: ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ ನಾಡಗೀತೆ ಹಾಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ.

ಸರ್ಕಾರದ ಆದೇಶ ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನು ಅಳವಡಿಸಿಕೊಂಡು ಅದರ ಪೂ‌ರ್ಣಪಾಠ ಬಳಸಬೇಕು ಹಾಗೂ ಆಲಾಪವಿಲ್ಲದೇ, ಪುನರಾವರ್ತನೆ ಇಲ್ಲದೆ 2 ನಿಮಿಷ 30 ಸೆಕೆಂಡುಗಳಲ್ಲಿ ಹಾಡಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ವಜಾ ಮಾಡಬೇಕು ಎಂದು ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರೈಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಕರ್ನಾಟಕ ಶಿಕ್ಷಣ ಕಾಯಿದೆ–1983ರ ಸೆಕ್ಷನ್‌ 3ರ ಪ್ರಕಾರ ಎಲ್ಲಾ ಶಾಲೆಗಳಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು, ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡಬೇಕು ಎಂಬ ರಾಜ್ಯ ಸರ್ಕಾರದ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

ಇಂತಹ ಆದೇಶ ಹೊರಡಿಸಲು ಸರ್ಕಾರಕ್ಕೆ ಯಾವುದೇ ಶಾಸನ ರೂಪಿಸುವ ಅವಶ್ಯಕತೆ ಇಲ್ಲ. ಸರ್ಕಾರಕ್ಕೆ ತನ್ನದೇ ಕಾರ್ಯಪಾಲನಾ ಆದೇಶ ಹೊರಡಿಸುವ ಅಧಿಕಾರವಿದೆ. ರಾಷ್ಟ್ರಗೀತೆಯನ್ನು ಹೀಗೆಯೇ ಇಂತಿಷ್ಟೇ ಅವಧಿಯಲ್ಲಿ ಹಾಗೂ ಇಂಥದ್ದೇ ಧಾಟಿಯಲ್ಲಿ ಹಾಡಬೇಕು ಎಂಬ ನಿಯಮಾವಳಿಗಳು ನಾಡಗೀತೆಯ ವಿಷಯದಲ್ಲೂ ಅನ್ವಯವಾಗುತ್ತವೆ ಎಂದು ಪೀಠ ಹೇಳಿದೆ.

ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿರುವುದರಿಂದ ಜನರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ. ಸರ್ಕಾರದ ಆದೇಶ ಪ್ರಶ್ನಿಸುವ ಯಾವುದೇ ಅಧಿಕಾರವನ್ನು ಅರ್ಜಿದಾರರು ಹೊಂದಿಲ್ಲ. ಅವರೇನೂ ಸರ್ಕಾರಿ ನೌಕರರಲ್ಲ ಅಥವಾ ಅವರ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದಾಗಲೀ ಇಲ್ಲ. ಹೀಗಾಗಿ, ಅವರ ಮೂಲಭೂತ ಹಕ್ಕು ಉಲ್ಲಂಘನೆ ಆಗಿದೆ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ನಿಮ್ಮ ಯಾವ ಹಕ್ಕುಗಳೂ ಉಲ್ಲಂಘನೆಯಾಗಿಲ್ಲ ಎಂಬುದನ್ನು ನೆನಪಿಡಿ. ಹೀಗಾಗಿ, ನಿಮ್ಮ ಅರ್ಜಿ ವಜಾ ಮಾಡಲಾಗುತ್ತಿದೆ ಎಂದು ಪೀಠ ತೀರ್ಪಿನಲ್ಲಿ ತಿಳಿಸಿದೆ.

ಇಂತಹದೇ ಧಾಟಿಯಲ್ಲಿ ನಾಡಗೀತೆ ಹಾಡಬೇಕೆಂದು ಸರ್ಕಾರ ಸುಖಾಸುಮ್ಮನೆ ಆದೇಶ ಹೊರಡಿಸಿಲ್ಲ. ನಾಡಗೀತೆ ವಿಚಾರವಾಗಿ ಹಲವು ನಿಯೋಗಗಳೊಂದಿಗೆ ಚರ್ಚಿಸಿದೆ. ಧಾಟಿಯನ್ನು ಅಂತಿಮಗೊಳಿಸಲು ತಜ್ಞರ ಸಮಿತಿ ರಚನೆ ಮಾಡಿತ್ತು. ಆ ಸಮಿತಿ ನೀಡಿದ ವರದಿ ಆಧರಿಸಿ ಮೈಸೂರು ಅನಂತ ಸ್ವಾಮಿ ಅವರ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದೆ ಎಂದು ನ್ಯಾಯಾಲಯ ಹೇಳಿದೆ.

ಕಿಕ್ಕೇರಿ ಕೃಷ್ಣಮೂರ್ತಿ ಅವರು ಉತ್ತಮ ಗಾಯಕ. ಯಾವುದೇ ಕೆಟ್ಟ ಭಾವನೆಯಿಂದ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಲ್ಲ. ವಿಚಾರಣೆ ವೇಳೆ ಹಿರಿಯ ಗಾಯಕಿ ಬಿ ಕೆ ಸುಮಿತ್ರಾ, ಮೃತ್ಯುಂಜಯ ದೊಡ್ದವಾಡ, ಕವಿ ಬಿ ಆರ್‌ ಲಕ್ಷ್ಮಣ್‌ ರಾವ್‌, ವೈ ಕೆ ಮುದ್ದಕೃಷ್ಣ ಅವರು ನ್ಯಾಯಾಲಯದಲ್ಲಿ ಹಾಜರಾಗಿ, ತಮ್ಮ ಮೂಲ್ಯವಾದ ಮಾಹಿತಿ ಹಾಗೂ ಸಲಹೆಗಳನ್ನು ನೀಡಿದ್ದಾರೆ. ಅವರ ಕಾರ್ಯ ಪ್ರಶಂಸನೀಯ ಎಂದು ನ್ಯಾಯಮೂರ್ತಿ ದೀಕ್ಷಿತ್‌ ಪ್ರಶಂಸಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ಮಧ್ಯಂತರ ಅರ್ಜಿದಾರ ಮೃತ್ಯುಂಜಯ ದೊಡ್ಡವಾಡ ಪರ ಹಿರಿಯ ವಕೀಲ ಸಿ ಎಚ್‌ ಹನುಮಂತರಾಯ ಹಾಗು ವಕಾಲತ್ತು ವಹಿಸಿದ್ದ ಎಸ್ ಸುನಿಲ್‌ ಕುಮಾರ್ ವಾದ ಮಂಡಿಸಿದ್ದರು.

ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್ (ಎಎಜಿ) ಎಸ್ ಎ ಅಹಮದ್‌ ಅವರು ನಾಡು, ನುಡಿ, ನೆಲ, ಜಲಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಾವು ಅನುಸರಿಸಬೇಕಾದ ಶಿಸ್ತು ಮತ್ತು ಅನುಶಾಸನಕ್ಕೆ ಹೈಕೋರ್ಟ್‌ ಈ ತೀರ್ಪಿನ ಮೂಲಕ ಮತ್ತೊಮ್ಮೆ ಅಧಿಕೃತ ಮುದ್ರೆ ಒತ್ತಿದೆ ಎಂದು ಹೇಳಿದರು.

ಪ್ರಕರಣದ ಹಿನ್ನೆಲೆ: ಜಯ ಭಾರತ ಜನನಿಯ ತನುಜಾತೆ, ನಾಡಗೀತೆಯನ್ನು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್‌ 25ರಂದು ಹೊರಡಿಸಿದ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಅನಂತಸ್ವಾಮಿ ಅವರು ನಾಡಗೀತೆಯ ಕೇವಲ ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಗಾಯಕ ಮತ್ತು ಸಂಗೀತ ಸಂಯೋಜಕ ಸಿ.ಅಶ್ವತ್ಥ್‌ ಅವರು ನಾಡಗೀತೆಯ ಎಲ್ಲಾ ಚರಣಗಳಿಗೆ ರಾಗ ಸಂಯೋಜಿಸಿದ್ದಾರೆ. ಹಾಗಾಗಿ, ಸರ್ಕಾರದ ಆದೇಶ ರದ್ದುಪಡಿಸಬೇಕು ಮತ್ತು ಸಿ ಅಶ್ವತ್ಥ್‌ ಅವರ ರಾಗ ಸಂಯೋಜಿಸಿದ ಧಾಟಿಯಲ್ಲೇ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ತೀರ್ಪು ಪ್ರಕಟಿಸುವ ಮುನ್ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರು, ‘ಕಾವ್ಯ ಪ್ರಕಾರ ಭಗವಂತನಿಗೆ ತುಂಬಾ ಹತ್ತಿರವಾದದು. ಹಾಗಾಗಿಯೇ, ವೇದ, ಉಪನಿಷತ್ತು, ಕುರಾನ್‌, ಬೈಬಲ್‌, ಯಹೂದಿಗಳ ಧಾರ್ಮಿಕ ಗ್ರಂಥ ತೋರಾಗಳೆಲ್ಲವೂ ಕಾವ್ಯ ರೂಪದಲ್ಲಿವೆ. ನಮ್ಮ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್‌ ಅವರ ಸಂಗೀತ ಆಸಕ್ತಿ ಮತ್ತು ಕೊಡುಗೆಯೂ ಇಂತಹ ಗಳಿಗೆಯಲ್ಲಿ ಸ್ಮರಣಾರ್ಹ ಎಂದರು.

ರಾಷ್ಟ್ರಕವಿ ಕುವೆಂಪು ಅವರದ್ದು ಕನ್ನಡದ ಕಂಪಿನ ಮಹೋನ್ನತ ವ್ಯಕ್ತಿತ್ವ. ಅವರು ನಾಡಗೀತೆಯನ್ನು 1931ರಲ್ಲೇ ರಚಿಸಿದ್ದರು. ಅದನ್ನು 1993ರಲ್ಲಿ ರಾಜ್ಯ ಸರ್ಕಾರ ಅಂಗೀಕರಿಸಿದೆ. ಈ ನಾಡಗೀತೆ ಅವರ ಇನ್ನಿತರೆ ಕೃತಿಗಳಂತೆಯೇ ಅಮೂಲ್ಯವಾದುದು. ನಾನು ಮೈಸೂರು ಅನಂತ ಸ್ವಾಮಿ ಮತ್ತು ಸಿ ಅಶ್ವತ್ಥ್‌ ಅವರ ರಾಗಸಂಯೋಜನೆಯಲ್ಲಿ ನಾಡಗಿತೆಯನ್ನು ಕೇಳಿದ್ದೇನೆ. ಎರಡೂ ರಾಗಗಳು ಅದ್ಭುತವಾಗಿವೆ. ಒಂದು ವೇಳೆ ಧಾಟಿಯ ಜಿಜ್ಞಾಸೆಯಲ್ಲಿ ಯಾವ ರೀತಿ ಹಾಡಬೇಕು ಎಂದು ಅನಂತಸ್ವಾಮಿ ಮತ್ತು ಸಿ ಅಶ್ವತ್ಥ್‌ ಅವರನ್ನು ತಕ್ಕಡಿಯಲ್ಲಿ ಇಟ್ಟು ತೂಗಿದರೆ ಯಾರ ಕಡೆ ವಾಲಬೇಕು ಎಂಬುದು ಗೊತ್ತಾಗದೆ ಅದು ಮುರಿದು ಬೀಳುತ್ತದೆ. ಆದ್ದರಿಂದ, ಇಂತಹ ವಿಷಯಗಳಲ್ಲಿ ಇಬ್ಬರೂ ಮಹನೀಯ ಸಂಗೀತಗಾರರು ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT