ಕೆಂಗೇರಿ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುತ್ತಿರುವ ಜನರು.
ಕೆಂಗೇರಿ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುತ್ತಿರುವ ಜನರು. 
ರಾಜ್ಯ

ಲೋಕಸಭಾ ಚುನಾವಣೆ: ಬಸ್, ರೈಲುಗಳಲ್ಲಿ ಜನವೋ ಜನ, ಹೈರಾಣಾದ ಜನತೆ...!

Manjula VN

ಬೆಂಗಳೂರು: ಮತದಾನ ದಿನ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಹುತೇಕ ಬಸ್ ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳಿಸಿದ್ದ ಹಿನ್ನೆಲೆಯಲ್ಲಿ ಸೂಕ್ತ ಬಸ್ ವ್ಯವಸ್ಥೆಯಿಲ್ಲದ ಕಾರಣ ಮನೆಗಳಿಗೆ ತೆರಳು ಜನರು ಸಂಕಷ್ಟ ಎದುರಿಸುವಂತಾಗಿತ್ತು.

ಚುನಾವಣಾ ಕರ್ತವ್ಯಕ್ಕೆ ಬಸ್ ಗಳನ್ನು ನಿಯೋಜನೆಗೊಳಿಸಿದ್ದ ಹಿನ್ನೆಯಲ್ಲಿ ಲಭ್ಯವಿದ್ದ ಬಸ್ ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಿಸಿಲ ತಾಪ ಒಂದೆಡೆಯಾದರೆ, ಬಸ್ ವ್ಯವಸ್ಥೆ ಇಲ್ಲದಿರುವುದು ಜನರಲ್ಲಿ ಮತದಾನ ಮಾಡುವ ಉತ್ಸಾಹವನ್ನು ಕುಗ್ಗಿಸಿತ್ತು.

ಇನ್ನು ಮೈಸೂರು ರಸ್ತೆಯಲ್ಲಿ ಕೆಂಗೇರಿ ಕ್ರಾಸಿಂಗ್‌ವರೆಗೆ ಇದ್ದ ವಾಹನ ದಟ್ಟಣೆ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿತ್ತು. ಸ್ಯಾಟಲೈಟ್‌ ಬಸ್ ನಿಲ್ದಾಣ ಮತ್ತು ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಸಂಖ್ಯೆ ಹೆಚ್ಚಾಗಿದ್ದದ್ದು ಕಂಡು ಬಂದಿತ್ತು. ಜನರು ತಮ್ಮ ಊರುಗಳಿಗೆ ಮರಳಲು ಹತಾಶರಾಗಿ ಕಾದುಕುಳಿತಿರುವುದು ಕಂಡು ಬಂದಿತ್ತು.

ಬಸ್ ಗಳಲ್ಲಿ ಜನದಟ್ಟಣೆ ಇದ್ದ ಕಾರಣ ರೈಲಿನತ್ತ ಮುಖ ಮಾಡಿದರೂ, ಅಲ್ಲಿಯೂ ನೂಕುನುಗ್ಗಲು ಇದ್ದದ್ದು ಜನರಲ್ಲಿ ಮತ್ತಷ್ಟು ಬೇಸರ ತರಿಸಿತ್ತು. ಕೆಂಗೇರಿಯಲ್ಲಿ ಹಳಿ ದಾಟುತ್ತಿದ್ದ ನೂರಾರು ಪ್ರಯಾಣಿಕರು ಹೇಗಾದರೂ ರೈಲು ಹತ್ತಬೇಕೆಂದು ಪ್ರಯತ್ನ ನಡೆಸುತ್ತಿದ್ದರು.

ರೈಲು ಹತ್ತಿ, ಒಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪ್ರಸನ್ನ ಎಂಬುವವರು ಪ್ರಯಾಣಿಕರಿಗೆ ಬೇಕಾದ ಸಾರಿಗೆ ಸೌಲಭ್ಯ ಕಲ್ಪಿಸದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ಮತದಾನ ಹಿನ್ನೆಲೆಯಲ್ಲಿ ನನ್ನ ಸ್ನೇಹಿತರೊಬ್ಬರ ಮದುವೆಯನ್ನು ಶುಕ್ರವಾರ ಬೆಳಿಗ್ಗೆ 10 ಗಂಟೆ ಬದಲಿಗೆ ಬೆಳಿಗ್ಗೆ 6.15ಕ್ಕೆ ನಿಗದಿಪಡಿಸಲಾಗಿತ್ತು. ಮದುವೆ ಬಳಿಕ ಮತದಾನ ಮಾಡಲು ಸಹಾಯ ಮಾಡಲು ಸಮಯವನ್ನು ಬದಲಿಸಲಾಗಿತ್ತು. ಹಾಗಾಗಿ ರಾಜಾಜಿನಗರದಿಂದ ಉಳ್ಳಾಲಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳಿ ಸಮಾರಂಭದಲ್ಲಿ ಪಾಲ್ಗೊಂಡಿದ್ದೆವು. ನಂತರ ಕೆಂಗೇರಿ ರೈಲು ನಿಲ್ದಾಣದಲ್ಲಿ ನಮ್ಮ ದ್ವಿಚಕ್ರ ವಾಹನವನ್ನು ಪಾರ್ಕ್ ಮಾಡಿ, ಬಸ್‌ಗಳಿಲ್ಲದ ಕಾರಣ ಮತ ಚಲಾಯಿಸಲು ರೈಲಿನಲ್ಲಿ ಊರಿಗೆ ಹೋಗಲು ರೈಲು ನಿಲ್ದಾಣಕ್ಕೆ ಹೋಗಿದ್ದೆವು, ಆದರೆ, ಸ್ಥಳದಲ್ಲಿ ಬಹಳ ಜನ ಸೇರಿದ್ದರು. ಶತಾಯಗತಾಯ ಪ್ರಯತ್ನದ ಬಳಿಕ ರೈಲು ಹತ್ತುವಲ್ಲಿ ಯಶಸ್ವಿಯಾದೆವು ಎಂದ ಪ್ರಸನ್ನ ಅವರು ಹೇಳಿದ್ದಾರೆ.

ವಾರಾಂತ್ಯ ಇದ್ದ ಹಿನ್ನೆಲೆಯಲ್ಲಿ ಶುಕ್ರವಾರ ಊರಿಗೆ ಹೋದರೆ, ಶನಿವಾರ ಹಾಗೂ ಭಾನುವಾರ ಎರಡೂ ದಿನ ಊರಿನಲ್ಲಿ ಉಳಿಯಬಹುದು ಎಂದು ಸಾಕಷ್ಟು ಜನರು ಊರುಗಳಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿಸಿದ್ದಾರೆ.

SCROLL FOR NEXT