ಬೆಳಗಾವಿ: ಬೆಳಗಾವಿ ಜಿಲ್ಲೆಯ ನಿಪಾಣಿ ತಾಲೂಕಿನ ಯಮಗರ್ನಿ ಗ್ರಾಮ ಇತ್ತೀಚೆಗೆ ವಿಚಿತ್ರ ದೃಶ್ಯವೊಂದಕ್ಕೆ ಸಾಕ್ಷಿಯಾಯಿತು. ಕಳೆದು ಹೋಗಿದ್ದ ನಾಯಿ ವಾಪಸ್ ಮನೆಗೆ ಬಂದಿದ್ದಕ್ಕೆ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ನಾಯಿಗೆ ಹಾರ ಹಾಕಿ ಔತಣ ಕೂಟ ಏರ್ಪಡಿಸಿ ಸಂಭ್ರಮಿಸಿದರು.
ಪ್ರೀತಿಯಿಂದ ಮಹಾರಾಜ್ ಎಂದು ಕರೆಯಲ್ಪಡುವ ಶ್ವಾನವು ದಕ್ಷಿಣ ಮಹಾರಾಷ್ಟ್ರದ ಪಂಢರಪುರದ ತೀರ್ಥಯಾತ್ರೆಯಲ್ಲಿ ಜನಸಂದಣಿಯಲ್ಲಿ ಕಳೆದುಹೋಗಿತ್ತು. ಆದರೆ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿರುವ ತನ್ನ ಹಳ್ಳಿಗೆ ಮಾರು 250 ಕಿಮೀ ನಡೆದುಕೊಂಡು ಮನೆ ತಲುಪಿದೆ. ಜೂನ್ ಕೊನೆಯ ವಾರದಲ್ಲಿ, ಮಹಾರಾಜ್ ಪಂಢರಪುರಕ್ಕೆ ತನ್ನ ಮಾಲೀಕ ಕಮಲೇಶ್ ಕುಂಬಾರ್ ಅವರ ಜೊತೆ ವಾರ್ಷಿಕವಾಗಿ ಹೋಗುವಂತೆ ವಾರಕರಿ ಪಾದಯಾತ್ರೆಗೆ ಹೋಗಿತ್ತು. ಪ್ರತಿ ವರ್ಷ ಆಷಾಢ ಏಕಾದಶಿ ಮತ್ತು ಕಾರ್ತಿಕಿ ಏಕಾದಶಿಯಂದು ಪಂಢಾರಪುರಕ್ಕೆ ಭೇಟಿ ನೀಡುತ್ತೇನೆ ಎಂದು ಕುಂಬಾರ್ ಹೇಳಿದರು. ಈ ವೇಳೆ ನಾಯಿ ಕೂಡ ಜೊತೆಗಿತ್ತು ಎಂದರು.
ಮಹಾರಾಜಿ ಯಾವಾಗಲೂ ಭಜನೆಗಳನ್ನು ಕೇಳಲು ಇಷ್ಟಪಡುತ್ತಿತ್ತು. ಒಮ್ಮೆ, ಅದು ಮಹಾಬಲೇಶ್ವರ ಬಳಿಯ ಜ್ಯೋತಿಬಾ ದೇವಸ್ಥಾನಕ್ಕೆ ಹಾಗೂ ಮತ್ತೊಂದು ಪಾದಯಾತ್ರೆಗೆ ನನ್ನೊಂದಿಗೆ ಬಂದಿತ್ತು ಎಂದು ಕುಂಬಾರ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಸುಮಾರು 250 ಕಿ.ಮೀ ವರೆಗೆ, ತನ್ನ ಸ್ನೇಹಿತರ ಗುಂಪಿನೊಂದಿಗೆ ಭಜನೆ ಮಾಡುತ್ತಾ ನಡೆದ ಮಾಲೀಕನನ್ನು ನಾಯಿ ಹಿಂಬಾಲಿಸಿತು.
ವಿಠ್ಠಲ ದೇವಸ್ಥಾನದ ದರ್ಶನದ ನಂತರ ನಾಯಿ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು, ನಾನು ಆತನನ್ನು ಹುಡುಕಲು ಹೋದಾಗ, ನಾಯಿಯು ಇನ್ನೊಂದು ಗುಂಪಿನೊಂದಿಗೆ ಹೊರಟುಹೋಗಿದೆ ಎಂದು ಅಲ್ಲಿದ್ದವರು ಹೇಳಿದರು ಎಂದು ಕುಂಬಾರ್ ತಿಳಿಸಿದ್ದಾರೆ.
"ನಾನು ಇನ್ನೂ ಅವನನ್ನು ಎಲ್ಲಾ ಕಡೆ ಹುಡುಕಿದೆ, ಆದರೆ ನನಗೆ ಮಹಾರಾಜ್ ಸಿಗಲಿಲ್ಲ. ಆತ ಬೇರೆಯರೊಂದಿಗೆ ಎಲ್ಲಿಗೋ ಹೋಗಿರಬೇಕೆಂದು ಭಾವಿಸಿ ನಾನು ಅಲ್ಲಿಂದ ವಾಪಸಾದೆ. ಜುಲೈ 14 ರಂದು ನನ್ನ ಊರಿಗೆ ಮರಳಿದೆ ಎಂದು ಕುಂಬಾರ್ ವಿವರಿಸಿದ್ದಾರೆ. ಮರುದಿನವೇ, ಕುಂಬಾರ ಗೆ ಅಚ್ಚರಿ ಕಾದಿತ್ತು. ಮಹಾರಾಜ್ ಏನೂ ಆಗಿಯೇ ಇಲ್ಲವೆಂಬಂತೆ ನನ್ನ ಮನೆ ಮುಂದೆ ಬಾಲ ಅಲ್ಲಾಡಿಸುತ್ತಾ ನಿಂತಿದ್ದ. ಅವರು ಚೆನ್ನಾಗಿ ತಿನ್ನುತ್ತಿದ್ದರು ಮತ್ತು ಸಂಪೂರ್ಣವಾಗಿ ಆರೋಗ್ಯಯುತವಾಗಿ ಕಾಣುತ್ತಿದ್ದ.
ಮಹಾರಾಜ್ ವಾಪಸಾಗಿದ್ದಕ್ಕೆ ಸಂತೋಷ ಉಂಟಾಗಿ ಗ್ರಾಮಸ್ಥರೆಲ್ಲಾ ಸೇರಿ ಹಬ್ಬ ಆಚರಿಸಿದೆವು ಎಂದು ಕುಂಬಾರ್ ತಿಳಿಸಿದ್ದಾರೆ. ನಾಯಿಯು ಮನೆಯಿಂದ 250 ಕಿಲೋಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ದೂರದಲ್ಲಿದ್ದರೂ ಅದು ತನ್ನ ದಾರಿಯನ್ನು ಕಂಡುಕೊಂಡು ವಾಪಾಸಾಗಿದೆ. ಇದೊಂದು ಅದ್ಭುತವಾಗಿದೆ. ಮಹಾರಾಜ್ ಗೆ ಪಾಂಡುರಂಗ ದೇವರು ಮಾರ್ಗ ತೋರಿಸಿದ್ದಾರೆ ಎಂದು ನಾವು ಭಾವಿಸಿದ್ದೇವೆ ಎಂದು ಖುಷಿ ಹಂಚಿಕೊಂಡಿದ್ದಾರೆ.