ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಕ್ಕಾಗಿ ಬಿಜೆಪಿ ಹಾಗೂ ತನ್ನ ಮಿತ್ರ ಪಕ್ಷ ಜೆಡಿಎಸ್ ಜಂಟಿ ಪಾದಯಾತ್ರೆ ಕೈಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ಆ.03 ರಂದು ಬಿಜೆಪಿ-ಜೆಡಿಎಸ್ ಜಂಟಿಯಾಗಿ ನಡೆಸುತ್ತಿರುವ 7 ದಿನಗಳ ಪಾದಯಾತ್ರೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಇದಕ್ಕೂ ಮುನ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ವಿಜಯೇಂದ್ರ ಮಾತನಾಡುತ್ತಿದ್ದರು.
ಸದನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮೂಲೆಗುಂಪು ಮಾಡುವುದರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಯಶಸ್ವಿಯಾಗಿದ್ದು, ಸದನದ ಹೊರಗೂ ಸರ್ಕಾರವನ್ನು ಮೂಲೆಗುಂಪು ಮಾಡುವ ಕಾಲ ಸನ್ನಿಹಿತವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ರಾಜ್ಯದಲ್ಲಿ ಬಡವರ, ಪರಿಶಿಷ್ಟ ಜಾತಿ, ಪಂಗಡಗಳ ವಿರೋಧಿ ಭ್ರಷ್ಟ ಸರಕಾರವಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. "ನಮ್ಮ ಮೈಸೂರು ಚಲೋ ಪಾದಯಾತ್ರೆ" (ಮಾರ್ಚ್ ಟು ಮೈಸೂರು) ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧದ ನಮ್ಮ ಹೋರಾಟವನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿದೆ" ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಮುದಾಯಗಳಿಗೆ ವಂಚಿಸಿದೆ. ದಲಿತರ ಹಣ ಲೂಟಿ ಮಾಡಿದೆ ಎಂದು ವಿಜಯೇಂದ್ರ ಆರೋಪಿಸಿದರು. 7 ದಿನಗಳ ಪಾದಯಾತ್ರೆ ಕುರಿತು ಮಾತನಾಡಿದ ಶಿಕಾರಿಪುರ ಶಾಸಕರು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಶನಿವಾರ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದಲ್ಲಿ ಸಿಎಂ ಪತ್ನಿ ಪಾರ್ವತಿ ಫಲಾನುಭವಿಯಾಗಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ಶೋಕಾಸ್ ನೋಟಿಸ್ ನೀಡಿದ ಕುರಿತು ಮಾತನಾಡಿದ ವಿಜಯೇಂದ್ರ, “ಕಾಂಗ್ರೆಸ್ ಸರ್ಕಾರ ಹೊಸ ಇತಿಹಾಸ ಸೃಷ್ಟಿಸಿದೆ. ಮುಖ್ಯಮಂತ್ರಿ ಇಲ್ಲದೆ ಸಚಿವ ಸಂಪುಟ ಸಭೆ ನಡೆಸಲಾಗಿದೆ. ರಾಜ್ಯಪಾಲರ ನೋಟಿಸ್‌ಗೆ ಉತ್ತರ ನೀಡಲು ಮುಖ್ಯಮಂತ್ರಿ ತೀರ್ಮಾನಿಸದೆ ಸಚಿವ ಸಂಪುಟ ಸಭೆ ನಡೆಸಿರುವುದು ಸ್ವೀಕಾರಾರ್ಹವಲ್ಲ ಎಂದರು.