ಬೆಂಗಳೂರು: ವಾರಕ್ಕೆ ಮೂರು ಬಾರಿ ಮಂಗಳೂರಿನಿಂದ ಬೆಂಗಳೂರಿನ ಯಶವಂತಪುರದವರೆಗೆ ಸಂಚರಿಸುವ ರೈಲಿನ ವೇಳಾಪಟ್ಟಿಯನ್ನು (ರೈಲು ಸಂಖ್ಯೆ 16576) ಬದಲು ಮಾಡಿರುವುದಾಗಿ ರೈಲ್ವೆ ಇಲಾಖೆಯ ಸಹಾಯಕ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮಂಗಳೂರು ಜಂಕ್ಷನ್ – ಯಶವಂತಪುರಕ್ಕೆ (ರೈಲು ಸಂಖ್ಯೆ 16576) ವಾರಕ್ಕೆ 3 ಬಾರಿ ಕಾರ್ಯಾಚರಿಸುವ ರೈಲಿನ ಸಮಯ ಬದಲಾಯಿಸುವಂತೆ ಬಹುದಿನಗಳಿಂದಲೂ ಸಾರ್ವಜನಿಕರಿಂದ ಮನವಿಯಿತ್ತು. ಇದೀಗ, ಸಾರ್ವಜನಿಕರ ಕೋರಿಕೆಯನ್ನು ಈಡೇರಿಸಲಾಗಿದೆ. ಈ ರೈಲು ಬೆಳಿಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ. ಸಾರ್ವಜನಿಕರು ಈ ರೈಲಿನ ಸೇವೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆಂದು ಹೇಳಿದ್ದಾರೆ.
ಸಚಿವ ಸೋಮಣ್ಣ ಅವರು ರೈಲಿನ ವೇಳಾಪಟ್ಟಿ ಬದಲಾಯಿಸಿದ್ದನ್ನು ಪ್ರಕಟಿಸಿದರ ಬೆನ್ನಲ್ಲೇ ಹಲವಾರು ಮನವಿಗಳು ಸಚಿವರಿಗೆ ಸಲ್ಲಿಕೆಯಾಗುತ್ತಿವೆ.
ಸದ್ಯಕ್ಕೆ ರೈಲ್ವೆ ವೇಳಾಪಟ್ಟಿಯ ಪ್ರಕಾರ, ಈ ರೈಲು ಬೆಳಗ್ಗೆ 11:30ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 8: 45ರ ಸುಮಾರಿಗೆ ಯಶವಂತಪುರ ರೈಲು ನಿಲ್ದಾಣವನ್ನು ತಲುಪುತ್ತಿದೆ,
ಮಂಗಳೂರು ಜಂಕ್ಷನ್ ನಿಂದ ಬೆಂಗಳೂರಿನ ಯಶವಂತಪುರಕ್ಕೆ ಆಗಮಿಸುವ ಈ ರೈಲು ಸದ್ಯಕ್ಕೆ ನಿಂತಿದೆ. ಈ ಬಾರಿಯ ಅಗಾಧ ಮಳೆಯಿಂದಾಗಿ ಪಶ್ಚಿಮ ಘಟ್ಟಗಳ ಅಲ್ಲಲ್ಲಿ ಭೂಕುಸಿತ ಉಂಟಾಗಿರುವುದರಿಂದ ಈ ರೈಲನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಸದ್ಯದಲ್ಲೇ ಈ ರೈಲಿನ ಸಂಚಾರ ಮತ್ತೆ ಶುರುವಾಗುವ ಸಾಧ್ಯತೆಗಳಿವೆ. ಆದರೂ, ರೈಲಿನ ವೇಳಾಪಟ್ಟಿ ಬದಲಾಗುವುದಿಲ್ಲ. ಈ ವರ್ಷದ ನ.1ರಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೊಸ ವೇಳಾಪಟ್ಟಿ ಬರಲಿದ್ದು, ಅಂದಿನಿಂದ ಈ ರೈಲು ಮಂಗಳೂರು ಜಂಕ್ಷನ್ ನಿಂದ ಬೆಳಗ್ಗೆ 7 ಗಂಟೆಗೇ ಹೊರಡಲಿದೆ ಎಂದು ಹೇಳಲಾಗುತ್ತಿದೆ.