ಬೆಂಗಳೂರು: ಬಡವರು, ಕೂಲಿ ಕಾರ್ಮಿಕರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಡಿಜಿಟಲ್ ಟಚ್ ನೀಡಲು ಸರ್ಕಾರ ಮುಂದಾಗಿದೆ.
ಇಂದಿರಾ ಕ್ಯಾಂಟೀನ್‌ಗಳಿಗೆ ಡಿಜಿಟಲ್ ಟಚ್ ನೀಡುವ ಮೂಲಕ ಹೋಟೆಲ್-ರೆಸ್ಟೋರೆಂಟ್ ಗಳ ರೀತಿಯಲ್ಲಿಯೇ ಆರ್ಡರ್ ಗಳ ಪಡೆಯಲು ಚಿಂತನೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಆದರೆ, ಸರ್ಕಾರ ಈ ಚಿಂತನೆಗೆ ನಾಗರೀಕರು ಹಾಗೂ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದು ಮತ್ತೊಂದು ರೀತಿಯ ಹಗರಣ ಎಂದು ಕಿಡಿಕಾರಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ನಗರದಲ್ಲಿ 169 ಇಂದಿರಾ ಕ್ಯಾಂಟೀನ್‌ಗಳ (ಐಸಿ) ಪೈಕಿ 160 ಕ್ಯಾಂಟೀನ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳುತ್ತಿದೆ. ಆದರೆ, ವಾಸ್ತವತೆ ವಿಭಿನ್ನವಾಗಿದೆ ಎಂದು ನಾಗರಿಕರು ಮತ್ತು ಕಾರ್ಯಕರ್ತರು ಹೇಳುತ್ತಿದ್ದಾರೆ.
ನಾಗರಭಾವಿ, ಬನ್ನೇರುಘಟ್ಟ ರಸ್ತೆ, ಕ್ವೀನ್ಸ್ ರಸ್ತೆ, ಮಾಗಡಿ ರಸ್ತೆ, ಜಯನಗರ 7ನೇ ಬ್ಲಾಕ್ ಸೇರಿದಂತೆ ಹಲವೆಡೆ ಇರುವ ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ ಹಾಕಲಾಗಿದೆ ಎಂದು ಹೇಳಿದ್ದಾರೆ.
ಬಿಬಿಎಂಪಿ ಅಧಿಕಾರಿಯೊಬ್ಬರು ಮಾತನಾಡಿ, ಇಂದಿರಾ ಕ್ಯಾಂಟೀನ್ ಗಳನ್ನು ಡಿಜಿಟಲೀಕರಣಗೊಳಿಸಲು ಶೀಘ್ರದಲ್ಲೇ ಟೆಂಡರ್‌ಗಳನ್ನು ಕರೆಯಲಾಗುವುದು ಎಂದು ಹೇಳಿದ್ದಾರೆ.
ಕೆಲ ಇಂದಿರಾ ಕ್ಯಾಂಟೀನ್ ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ವರದಿಗಳಿವೆ. ಇದಕ್ಕೆ ಗುತ್ತಿಗೆದಾರರ ಸಮಸ್ಯೆ, ಕ್ಯಾಂಟೀನ್ ಸಮಸ್ಯೆ, ಸಿಬ್ಬಂದಿ ಸಮಸ್ಯೆ ಅಥವಾ ಊಟದ ಕಾರಣಗಳಿರಬಹುದು. ಗ್ರಾಹಕರು ಏನು ಯೋಚಿಸುತ್ತಿದ್ದಾರೆ ಮತ್ತು ಸಮಸ್ಯೆ ಎನು ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕಿದೆ. ಆದ್ದರಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ ಡಿಜಿಟಲ್ ಪರದೆಗಳನ್ನು ಪರಿಚಯಿಸಲು ಚಿಂತನೆ ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗ್ರಾಹಕರು ಆರ್ಡರ್ ನೀಡಿದರೆ, ಇದರ ಮಾಹಿತಿ ಪ್ರಧಾನ ಕಚೇರಿಗೂ ರವಾನೆಯಾಗುತ್ತಿರುತ್ತದೆ. ಈ ಆರ್ಡರ್ ಗಳನ್ನು ಲೈವ್ ಆಗಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ. ಈ ಮೂಲಕ ಯಾವ ಯಾವ ಕ್ಯಾಂಟೀನ್'ಗಳು ಕಾರ್ಯನಿರ್ವಹಿಸುತ್ತಿವೆ, ಎಲ್ಲೆಲ್ಲಿ ಬೇಡಿಕೆ ಹೆಚ್ಚಿದೆ, ದೂರುಗಳೇನು ಮತ್ತು ನಾಗರಿಕರ ಅನಿಸಿಕೆಗಳನ್ನು ಎಂಬುದನ್ನು ನಾವು ತಿಳಿದುಕೊಳ್ಳಬಹುದು. ಇದಕ್ಕಾಗಿ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಬಿಬಿಎಂಪಿಯ ಐಟಿ ವಿಭಾಗವು ಈ ಕುರಿತ ವಿವರಗಳನ್ನು ಸಿದ್ಧಪಡಿಸುತ್ತಿದೆ ಎಂದು ತಿಳಿಸಿದ್ದಾರೆ.
ರಾಜರಾಜೇಶ್ವರಿನಗರದ 15 ಕ್ಷೇತ್ರಗಳಲ್ಲಿ ಡಿಜಿಟಲ್ ಸ್ಕ್ರೀನ್ ಟ್ರಯಲ್ ನಡೆಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್'ಗಳಲ್ಲಿ ಕ್ಯಾಂಟೀನ್ ಇರುವ ಸ್ಥಳ, ಆಹಾರದ ಗುಣಮಟ್ಟ, ಶುಚಿತ್ವ, ಗುತ್ತಿಗೆಯ ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಪರಿಹರಿಸುವ ಬದಲು ಡಿಜಿಟಲೀಕರಣ ಕುರಿತು ಬಿಬಿಎಂಪಿ ಚಿಂತನೆ ನಡೆಸುತ್ತಿದೆ. ಗುತ್ತಿಗೆದಾರರು ಹಾಗೂ ಗುತ್ತಿಗೆ ಸಂಸ್ಥೆಗಳೇ ಸಮಸ್ಯೆ ಎಂಬುದು ತಿಳಿದಿರುವುದೇ ಆದರೆ, ಸ್ಥಳೀಯ ಅಡುಗೆ ಸಂಸ್ಥೆಗಳಿಗೆ ಗುತ್ತಿಗೆ ನೀಡಬೇಕು. ಇದರಿಂದ ಸ್ಥಳೀಯರಿಗೂ ಉದ್ಯೋಗಾವಕಾಶ ಕಲ್ಪಿಸಿದಂತಾಗುತ್ತದೆ ಎಂದು ನಗರದ ನಿವಾಸಿ ತಾರಾ ಕೃಷ್ಣಸ್ವಾಮಿ ಎಂಬುವವರು ಹೇಳಿದ್ದಾರೆ.