ಬೆಂಗಳೂರು: ಸ್ಕೂಟರ್‌ನಲ್ಲಿ ಬರುತ್ತಿದ್ದ ಕಳ್ಳ ''420 ಮಂಜ''ನನ್ನು ಪೊಲೀಸ್ ಪೇದೆಯೊಬ್ಬರು ಸಿನಿಮೀಯ ಶೈಲಿಯಲ್ಲಿ ಹಿಡಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತುಮಕೂರು ಪೊಲೀಸ್ ಪೇದೆಯ ಸಾಹಸದ ವಿಡಿಯೋ ಇದೀಗ ಎಲ್ಲಡೆ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯ ಸಿಗ್ನಲ್ ಬಳಿ ತುಮಕೂರು ಜಿಲ್ಲೆ ಕೊರಟಗೆರೆ ಠಾಣೆ ಪೊಲೀಸ್ ಪೇದೆ ದೊಡ್ಡಲಿಂಗಯ್ಯ ಎಂಬುವವರು ಆರೋಪಿ ಕಳ್ಳ ಮಂಜ ಅಲಿಯಾಸ್ 420 ಮಂಜ ಅಲಿಯಾಸ್ ಹೊಟ್ಟೆ ಮಂಜ ಎಂಬಾತನನ್ನು ಸೆರೆ ಹಿಡಿದಿದ್ದಾರೆ.
ಕಳ್ಳನನ್ನು ಹಿಡಿಯುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸ್ ಕಾನ್‌ಸ್ಟೇಬಲ್ ಕರ್ತವ್ಯ ನಿಷ್ಠೆಗೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಖತರ್ನಾಕ್ ಕಳ್ಳ
ಮೂಲಗಳ ಪ್ರಕಾರ ಆರೋಪಿ ಕಳ್ಳ ಮಂಜ ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಈ ಖತರ್ನಾಕ್ ಕಳ್ಳನಿಗೆ ಚಿನ್ನದ ಸರ ಹಾಕಿರುವ ವೃದ್ಧೆಯರೇ ಟಾರ್ಗೆಟ್. ವೃದ್ಧೆಯರನ್ನೇ ಟಾರ್ಗೆಟ್ ಮಾಡಿ, ಪಿಂಚಣಿ, ಸರ್ಕಾರದ ಸವಲತ್ತು ಕೊಡಿಸುತ್ತೇನೆಂದು ನಂಬಿಸಿ, ಚಿನ್ನದ ಸರ ಕದ್ದು ಖತರ್ನಾಕ್ ಮಂಜ ಪರಾರಿಯಾಗುತ್ತಿದ್ದ. ಈತನ ವಿರುದ್ಧ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಹೆಬ್ಬೂರು ಪೊಲೀಸ್ ಠಾಣೆ ಸೇರಿ ಸುಮಾರು 10ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿದ್ದವು.
ಮಂಜನ ಬಂಧನಕ್ಕೆ ಜಾಲ ಬೀಸಿದ್ದ ಪೊಲೀಸರು
ಸುಮಾರು 1 ತಿಂಗಳಿಂದ ಪೊಲೀಸರ ಕೈಗೆ ಸಿಗದೇ ಕಣ್ತಪ್ಪಿಸಿ ಓಡಾಡುತ್ತಿದ್ದ 420 ಮಂಜನನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದರು. ಬೆಂಗಳೂರಿನ ಮತ್ತಿಕೆರೆ ಕಡೆಯಿಂದ ಸದಾಶಿವನಗರ ಪೊಲೀಸ್ ಠಾಣೆ ಕಡೆಗೆ, ಬಿಳಿ ಬಣ್ಣದ ಹೋಂಡಾ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ಬರುತ್ತಿರುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದರು. ಇದೇ ಸಂದರ್ಭದಲ್ಲಿ ಪೇದೆ ದೊಡ್ಡಲಿಂಗಯ್ಯ ಸದಾಶಿವನಗರ ಠಾಣೆ ಸಿಗ್ನಲ್ ಬಳಿ 420 ಮಂಜನನ್ನು ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್ ದೊಡ್ಡಲಿಂಗಯ್ಯ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಳ್ಳನನ್ನ ಹಿಡಿದಿದ್ದಾರೆ.
ಸಿನಿಮೀಯ ರೀತಿಯ ಕಾರ್ಯಾಚರಣೆ
ಸಿಗ್ನಲ್‌ನಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಕಳ್ಳನನ್ನು ಪೇದೆ ಅಡ್ಡಗಟ್ಟಿದ್ದಾರೆ. ಆದರೂ ಅವರನ್ನೂ ಎಳೆದುಕೊಂಡು ಕಳ್ಳ ಮಂಜ ಮುಂದೆ ಸಾಗಿದ್ದಾನೆ. ಪಟ್ಟು ಬಿಡದ ಪೊಲೀಸ್ ಪೇದೆ ದೊಡ್ಡಲಿಂಗಯ್ಯ ಆತನನ್ನು ಬೆನ್ನಟ್ಟಿ ಕಾಲನ್ನು ಹಿಡಿದು ನೆಲಕ್ಕೆ ಬೀಳಿಸಿದ್ದಾರೆ. ಈ ವೇಳೆ ಅಲ್ಲಿದ್ದ ಟ್ರಾಫಿಕ್ ಪೊಲೀಸರು ಮತ್ತು ಸ್ಥಳೀಯರು ಕಳ್ಳನನ್ನು ಹಿಡಿಯಲು ನೆರವಾಗಿದ್ದಾರೆ. ಮಂಜ ತಪ್ಪಿಸಿಕೊಳ್ಳಲು ಅಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿ ಮೇಲೂ ಹಲ್ಲೆ ನಡೆಸಿದ್ದಾನೆ. ನಂತರ ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿ ಕಳ್ಳನಿಗೆ ಹಿಗ್ಗಾಮುಗ್ಗಾ ಬಾರಿಸಿ, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಖತರ್ನಾಕ್ ಕಳ್ಳ 420 ಮಂಜನನ್ನು ಬಂಧಿಸಿ ಕೊರಟಗೆರೆ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ತನಿಖೆ ಮುಂದುವರಿದಿದೆ.