ಬೆಂಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೆ ವಾಡಿಕೆಗಿಂತ ಹೆಚ್ಚಿನ ಮುಂಗಾರು ಮಳೆಯಿಂದಾಗಿ ರಾಜ್ಯದಲ್ಲಿ 58 ಮಂದಿ ಸಾವನ್ನಪ್ಪಿದ್ದು, 80,000 ಹೆಕ್ಟೇರ್‌ಗಳಲ್ಲಿ ಬೆಳೆ ಹಾನಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಒಳನಾಡಿನಲ್ಲಿ ಸರಾಸರಿ 260 ಮಿ.ಮೀ ವಾಡಿಕೆ ಮಳೆಯಾಗುತಿತ್ತು. ಆದರೆ ಈ ವರ್ಷ 322 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.24ರಷ್ಟು ಅಧಿಕ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವೆಡೆ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮಲೆನಾಡು ಭಾಗದಲ್ಲಿ 1,361 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ. 21ರಷ್ಟು ಅಧಿಕ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ 2,947 ಮಿ.ಮೀ ಮಳೆಯಾಗಿದ್ದು, ಶೇ.28ರಷ್ಟು ಅಧಿಕವಾಗಿದೆ. ರಾಜ್ಯದಲ್ಲಿ 699 ಮಿ.ಮೀ ಮಳೆಯಾಗಿದ್ದು, ಶೇ.26 ರಷ್ಟು ಅಧಿಕ ಮಳೆಯಾಗಿದೆ. ಈ ವರ್ಷ ಯಾವುದೇ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿಲ್ಲ ಎಂದು ಅವರು ಹೇಳಿದರು.
ಕಳೆದ ತಿಂಗಳು ಮಳೆ ಕಡಿಮೆಯಾಗಿದ್ದ ಕೋಲಾರ, ಚಿಕ್ಕಬಳ್ಳಾಪುರ, ಯಾದಗಿರಿ, ಕೊಪ್ಪಳ, ವಿಜಯನಗರ ಮತ್ತು ರಾಯಚೂರಿನಂತಹ ಜಿಲ್ಲೆಗಳಲ್ಲಿ ಕಳೆದ 10 ದಿನಗಳಲ್ಲಿ ಉತ್ತಮ ಮಳೆಯಾಗಿದೆ. ಮತ್ತೆ ಆಗಸ್ಟ್ 16 ರಿಂದ ಮುಂಗಾರು ತೀವ್ರಗೊಳ್ಳುವ ಸಾಧ್ಯತೆಯಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿದ್ದು, ಅನಗತ್ಯ ಪ್ರವಾಹ ಪರಿಸ್ಥಿತಿ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಬಾರಿ ಮಳೆಯಿಂದಾಗಿ 58 ಜನರು ಸಾವನ್ನಪ್ಪಿದ್ದಾರೆ. 2022ರಲ್ಲಿ 75 ಜನರು ಸಾವನ್ನಪ್ಪಿದ್ದರು. ಪ್ರತಿಯೊಬ್ಬರ ಜೀವ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದ್ದು, ಮುಂದೆ ಇಂತಹ ಅನಾಹುತಗಳು ಸಂಭವಿಸದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಆಗಸ್ಟ್ 15ರ ನಂತರ ಮಲೆನಾಡು, ಕರಾವಳಿ, ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ವಿಚಾರ ಕುರಿತು ಮಹತ್ವದ ಸಭೆ ನಡೆಯಲಿದೆ ಎಂದು ಸಚಿವರು ತಿಳಿಸಿದರು.
ಮಳೆಯಿಂದಾಗಿ ರಾಜ್ಯದಲ್ಲಿ 80,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಪೈಕಿ 78, 679 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಬೆಳೆ ಹಾಗೂ 2,294 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಪ್ರದೇಶ ನಷ್ಟಕ್ಕೊಳಗಾದ ರೈತರಿಗೆ ವಾರದೊಳಗೆ ಪರಿಹಾರ ವಿತರಿಸಲಾಗುವುದು ಎಂದು ಭರವಸೆ ನೀಡಿದ ಸಚಿವರು, ಈ ಬಾರಿ 1,126 ಮನೆಗಳು ಸಂಪೂರ್ಣವಾಗಿ ಕುಸಿತವಾಗಿದ್ದು, 1,176 ಮನೆಗಳು ತೀವ್ರ, 2,338 ಮನೆಗಳು ಭಾಗಶ:ವಾಗಿ ಒಟ್ಟಾರೇ 8,000 ಮನೆಗಳು ಹಾನಿಯಾಗಿರುವುದಾಗಿ ಸಚಿವರು ಮಾಹಿತಿ ನೀಡಿದರು.