ಬೆಂಗಳೂರು: ಕರ್ನಾಟಕ ವೀರಶೈವ ಮಹಾಸಭೆಯ ನೂತನ ಅಧ್ಯಕ್ಷರಾಗಿ ಮಾಜಿ ಡಿಜಿಪಿಶಂಕರ್ ಬಿದರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವೀರಶೈವ ಮಹಾಸಭೆ ರಾಜ್ಯದ ಅತ್ಯಂತ ಪ್ರಭಾವಿ ಸಮುದಾಯದ ಗುಂಪುಗಳಲ್ಲಿ ಒಂದಾಗಿದೆ, ವೀರಶೈವ-ಲಿಂಗಾಯತರು ಸುಮಾರು 150 ಕ್ಷೇತ್ರಗಳಲ್ಲಿ ವಿಧಾನಸಭಾ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ,
ಇದೀಗ ಈ ಸಮುದಾಯದ ನೂತನ ಅಧ್ಯಕ್ಷರಾಗಿ ಶಂಕರ್ ಬಿದರಿಯವರ ಆಯ್ಕೆ ಸಮಾಜದ ಒಳಿತು ಮತ್ತು ಸಮೃದ್ಧಿಗಾಗಿ ಮತ್ತಷ್ಟು ಸೇವೆ ಪ್ರೇರಣೆ ನೀಡುವ ಮೂಲಕ ಮಹಾಸಭೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಲಿದೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ, ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕಾರ್ಯಕಾರಿಣಿ ಸದಸ್ಯೆ ಎಚ್.ಎಂ.ರೇಣುಕಾ ಪ್ರಸನ್ನ, ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ, ತುಮಕೂರಿನ ಡಿ.ಆರ್.ಪರಮೇಶ್, ಮಂಡ್ಯದ ಆನಂದ, ಹಾವೇರಿಯ ಕೋರಿ ಶೆಟ್ಟರ್, ಚಿತ್ರದುರ್ಗದ ಶಿವಕುಮಾರ್, ರಾಮನಗರದ ಯೋಗಾನಂದ, ಬಾಲಚಂದ್ರ ಮತ್ತು ಗೌರೀಶ್ ಆರಾಧ್ಯ.ಸೇರಿದಂತೆ ಜಿಲ್ಲಾಧ್ಯಕ್ಷರು ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ಶಂಕರ್ ಬಿದರಿಯವರು ಮಾಜಿ ಎಂಎಲ್‌ಸಿ ತಿಪ್ಪಣ್ಣ ಅವರಿಂದ ಅಧಿಕಾರ ಸ್ವೀಕರಿಸಿದರು. ಮಹಾಸಭಾದ ಚುನಾವಣಾ ಸಂಸ್ಥೆಯು 31,000 ಸದಸ್ಯರನ್ನು ಒಳಗೊಂಡಿದೆ.
ತಮ್ಮ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿರುವ ಶಂಕರ್ ಬಿದರಿಯವರು, ನನ್ನನ್ನು ಬೆಂಬಲಿಸಿದ ಮತ್ತು ನನ್ನನ್ನು ಅವಿರೋಧವಾಗಿ ಗೆಲ್ಲಲು ಸಹಾಯ ಮಾಡಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಸಮುದಾಯದ ಸಮಗ್ರ ಅಭಿವೃದ್ಧಿ ಮತ್ತು ಸಮಾಜದಲ್ಲಿ ಹೆಚ್ಚಿನ ಐಕ್ಯತೆಗಾಗಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಶಂಕರ್ ಬಿದರಿಯವರು ನೈತಿಕತೆ, ಶಿಸ್ತಿನೊಂದಿಗೆ ತಮ್ಮ ಸೇವೆಗಾಗಿ ಜನಪ್ರಿಯರಾಗಿದ್ದು, ಅನೇಕ ಐಪಿಎಸ್ ಅಧಿಕಾರಿಗಳು ನಿರಾಕರಿಸಿದ ಕಾಡುಗಳ್ಳ ವೀರಪ್ಪನ್ ಅನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಹೆಸರುವಾಸಿಯಾದ ಅಧಿಕಾರಿಯಾಗಿದ್ದಾರೆ, ಇದರೊಂದಿಗೆ ಕುಖ್ಯಾತ ಅಪರಾಧಿಯಿಂದ ರಾಜ್ಯವನ್ನು ಉಳಿಸಿದ ಕೀರ್ತಿಗೆ ಪಾತ್ರರಾಗಿದ್ದರು. ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.