ನವದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಸಂಸ್ಥೆಯ ಹಿರಿಮೆಗೆ ಮತ್ತೊಂದು ಮಹತ್ತರ ಗರಿ ದೊರೆತಿದ್ದು, 'ದೇಶದ ಉತ್ಯುತ್ತಮ ವಿಶ್ವ ವಿದ್ಯಾಲಯ' ಎಂಬ ಕೀರ್ತಿಗೆ ಭಾಜನವಾಗಿದೆ.
ಹೌದು.. ರಾಷ್ಟ್ರೀಯ ಸಂಸ್ಥೆ ಶ್ರೇಯಾಂಕ ಚೌಕಟ್ಟು National Institute Ranking Framework (NIRF) ಬಿಡುಗಡೆ ಮಾಡಿರುವ ದೇಶದ ಟಾಪ್ 10 ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು IISc ಗೆ ಅಗ್ರ ಸ್ಥಾನ ಲಭಿಸಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು ಈ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದೆಹಲಿ ಭಾರತ್ ಮಂಟಪಂ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಶಿಕ್ಷಣ ರಾಜ್ಯ ಸಚಿವ ಸುಕಾಂತೋ ಮಜುಂದಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
National Institute Ranking Framework (NIRF) ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು, ಎಂಜಿನಿಯರಿಂಗ್, ನಿರ್ವಹಣೆ, ಔಷಧಾಲಯ, ವೈದ್ಯಕೀಯ, ದಂತ ವೈದ್ಯಕೀಯ, ಕಾನೂನು, ವಾಸ್ತುಶಿಲ್ಪ ಮತ್ತು ಯೋಜನೆ, ಕೃಷಿ ಮತ್ತು ಸಂಬಂಧಿತ ವಲಯಗಳು ಮತ್ತು ನಾವೀನ್ಯತೆ ಸೇರಿದಂತೆ ಒಟ್ಟು 13 ವಿವಿಧ ವಿಭಾಗಗಳಿಗೆ NIRF ಶ್ರೇಯಾಂಕ ಪಟ್ಟಿಗಳನ್ನು ಬಿಡುಗಡೆ ಮಾಡುತ್ತದೆ.
ವಿವಿಧ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳಿಗೆ ಶ್ರೇಯಾಂಕ ನೀಡಲು ವಿಶಾಲವಾದ ನಿಯತಾಂಕಗಳನ್ನು ಗುರುತಿಸಲು MHRD ಸ್ಥಾಪಿಸಿದ ಶ್ರೇಯಾಂಕ ಸಂಸ್ಥೆಗಳಿಗೆ ಕ್ರಿಯಾ ಸಮಿತಿಯು ಒಂದು ವಿಧಾನವನ್ನು ಸಿದ್ಧಪಡಿಸಿದ್ದು, ಬೋಧನೆ, ಕಲಿಕೆ ಮತ್ತು ಸಂಪನ್ಮೂಲಗಳು, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ, ಪದವಿ ಫಲಿತಾಂಶ, ಪ್ರಭಾವ ಮತ್ತು ಒಳಗೊಳ್ಳುವಿಕೆ ಮತ್ತು ಗ್ರಹಿಕೆಗಳ ಮೇಲೆ ಸಂಸ್ಥೆಗಳನ್ನು ಶ್ರೇಣೀಕರಿಸುತ್ತದೆ.
ಬೆಂಗಳೂರು IISc ಅತ್ಯುತ್ತಮ ವಿವಿ
ಇನ್ನು ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರು IISc ಅಗ್ರಸ್ಥಾನ ಪಡೆದಿದ್ದು, ದೆಹಲಿಯ ಜವಹರ್ ಲಾಲ್ ನೆಹರೂ ವಿವಿ ಎರಡನೇ ಸ್ಥಾನದಲ್ಲಿದೆ. ದೆಹಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ 3ನೇ ಸ್ಥಾನದಲ್ಲಿದ್ದು, ಮಣಿಪಾಲದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆ ನಂತರದ ಸ್ಥಾನದಲ್ಲಿದೆ.