ಬೆಂಗಳೂರು/ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ ಬೆನ್ನಲ್ಲೇ ಸರ್ಕಾರದಲ್ಲಿ ಹಲವು ಬೆಳವಣಿಗೆಗಳು ಆಗುತ್ತಿದ್ದು, ಇಡೀ ಸಚಿವ ಸಂಪುಟ ಅವರ ಬೆನ್ನಿಗೆ ನಿಂತಿದೆ. ಸಿಎಂ ಸಿದ್ದರಾಮಯ್ಯ ಬರುವ ಗುರುವಾರ ಆ.22ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಈ ಮೂಲಕ ಶಾಸಕರ ವಿಶ್ವಾಸ ಪಡೆಯಲು ಮುಂದಾಗಿದ್ದಾರೆ. ಅಲ್ಲದೇ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರುವ ಬೆನ್ನಲ್ಲೇ ಈ ಶಾಸಕಾಂಗ ಸಭೆ ಕರೆದಿರುವುದು ಮಹತ್ವ ಪಡೆದುಕೊಂಡಿದೆ.
ಆಗಸ್ಟ್ 22 ರಂದು ಶಾಸಕಾಂಗ ಪಕ್ಷ(CLP) ಸಭೆ ಕರೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ವಿಶ್ವಾಸ ಪಡೆಯಲು ಮುಂದಾಗಿದ್ದಾರೆ. ಅಲ್ಲದೇ ರಾಜ್ಯಪಾಲರ ವಿರುದ್ಧ ಶಾಸಕಾಂಗ ಸಭೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು ಇಡೀ ಪ್ರಕರಣದ ಬೆಳವಣಿಗೆ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಲಿದ್ದಾರೆ. ಜೊತೆಗೆ ಮುಂದಿನ ಹೋರಾಟಗಳಿಗೆ ಶಾಸಕರ ಸಹಕಾರ ಕೋರಲಿದ್ದಾರೆ.
ಭಾರತದಲ್ಲಿ ಭ್ರಷ್ಟಾಚಾರದ ಜನಕ ಕಾಂಗ್ರೆಸ್. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನಿಗೆ ಕಾಂಗ್ರೆಸ್ ಹೈಕಮಾಂಡ್ ನಿಂತಿರುವುದು ಆಶ್ಚರ್ಯ ಏನಲ್ಲ. ಕಾಂಗ್ರೆಸ್ ಹೈಕಮಾಂಡ್ ಯಾವಾಗಲೂ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ಭ್ರಷ್ಟರಿಗೆ ರಕ್ಷಣೆ ನೀಡುತ್ತೆ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಅರ್ಥಾತ್ ಮನಮೋಹನ್ ಸಿಂಗ್ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಎಲ್ಲ ಅವಧಿಯಲ್ಲೂ ಕಾಂಗ್ರೆಸ್ ಭ್ರಷ್ಟಾಚಾರದ ಪರಾಕಾಷ್ಠೆ ತಲುಪಿತ್ತು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ಗೆ ಜಗತ್ತಿನಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಪಕ್ಷ ಎಂದು ಖ್ಯಾತಿ ಇತ್ತು. ಹೀಗಾಗಿ ಕಾಂಗ್ರೆಸ್ ಪಕ್ಷ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲುತ್ತೆ ಎಂದು ಹೇಳಿದರು.
ನ್ಯಾಯಯುತ ತನಿಖೆಗಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ: ಸಿಟಿ ರವಿ
13 ವರ್ಷಗಳ ಹಿಂದೆ ಅಂದು ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರ ವಿರುದ್ಧವೂ ತನಿಖೆಗೆ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿದ್ದರು. ಅಂದಿನ ರಾಜ್ಯಪಾಲರ ನಡೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದರು. ನ್ಯಾಯಯುತ ತನಿಖೆಯಾಗಲಿ ಎಂದು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಹೇಳಿದರು.