ಬೆಂಗಳೂರು: ಜೈಲಿನಲ್ಲಿ ವಿಐಪಿ ಆರೋಪಿಗಳಿಗೆ ರಾಜಾತಿಥ್ಯ ಸಿಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೇ ಈ ಬಗ್ಗೆ ಆರೋಪಗಳು ಸಾಕಷ್ಟು ಬಂದಿದ್ದವು. ಈಗ ದರ್ಶನ್ ವಿಚಾರದಲ್ಲಿ ಮಾತ್ರ ಏಕೆ ಸುದ್ದಿಯಾಗುತ್ತಿದೆ ಎಂದು ಮಾಜಿ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಷ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಕೈಯಲ್ಲಿ ಚಹಾ ಮಗ್ ಮತ್ತು ಸಿಗರೇಟ್ ಹಿಡಿದುಕೊಂಡು ನಂತರ ರೌಡಿಶೀಟರ್ ಸತ್ಯನ ಜೊತೆ ವಿಡಿಯೊ ಕಾಲ್ ಮಾಡುತ್ತಿರುವ ಫೋಟೋ-ವಿಡಿಯೊ ವ್ಯಾಪಕವಾಗಿ ವೈರಲ್ ಆದ ಬಳಿಕ ದರ್ಶನ್ ಜೈಲಿನಲ್ಲಿದ್ದರೂ ರಾಜಾತಿಥ್ಯ ಸಿಗುತ್ತಿದೆ. ಇಚ್ಛೆ ಪಟ್ಟಾಗಲೆಲ್ಲ ನಾನ್ ವೆಜ್ ಬಿರಿಯಾನಿ, ಧೂಮಪಾನ, ಮದ್ಯಪಾನ ಪೂರೈಕೆಯಾಗುತ್ತಿದೆ ಎಂದು ಜೈಲಿನ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳು ಸುಮಲತಾ ಅವರ ಬಳಿ ಪ್ರತಿಕ್ರಿಯೆ ಕೇಳಿದರು.
ಜೈಲಲ್ಲಿ ಸ್ವಲ್ಪ ಹಣ ಖರ್ಚು ಮಾಡಿದರೆ ಅವರಿಗೆ ಎಲ್ಲ ಸಿಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಫೋನ್, ಸಿಗರೇಟ್, ಡ್ರಗ್ಸ್, ಡ್ರಿಂಕ್ಸ್ ವ್ಯವಸ್ಥಿತವಾಗಿ ಸಿಗುವ ವ್ಯವಸ್ಥೆ ಕೇವಲ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಮಾತ್ರವಲ್ಲ ಕರ್ನಾಟಕ, ಇಡೀ ಇಂಡಿಯಾದಲ್ಲಿ ಮತ್ತು ಅಮೆರಿಕದಂತೆಹ ದೇಶಗಳಲ್ಲಿ ಕೂಡ ನಡೆಯುತ್ತದೆ. ಇದು ವ್ಯವಸ್ಥೆಯಲ್ಲಿ ಭ್ರಷ್ಠಾಚಾರ ಖಂಡಿತಾ ಸರಿಯಲ್ಲ, ಕಾನೂನಿಗೆ ವಿರುದ್ಧವಾಗಿದೆ. ಆದರೆ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ, ಹೀಗಿರುವಾಗ ನೀವು ದರ್ಶನ್ ಒಬ್ಬ ವ್ಯಕ್ತಿಯನ್ನೇ ಗುರಿಯಾಗಿಟ್ಟುಕೊಂಡು ಏಕೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದರು.
ಜೈಲಲ್ಲಿ ಈ ರೀತಿ ನಡೆಯುತ್ತಿರುವುದು ಇದೇ ಮೊದಲಾ ಎಂದು ನೀವೇ ಎದೆ ಮುಟ್ಟಿಕೊಂಡು ಒಂದು ಸಾರಿ ಹೇಳಿ, ಎಷ್ಟೋ ವರ್ಷಗಳಿಂದ ಈ ರೀತಿ ನಡೆಯುತ್ತಿದೆ, ದರ್ಶನ್ ಇರೋದರಿಂದ ಅವರದ್ದು ತಪ್ಪು ಎಂದು ಫೋಕಸ್ ಆಗುತ್ತಿದೆ. ಈ ಹಿಂದೆ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಈ ಬಗ್ಗೆ ಆಕ್ಷೇಪ ಎತ್ತಿ ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದರು.
ಆ ಸಮಯದಲ್ಲಿ ಮಾಧ್ಯಮಗಳು ಸರ್ಕಾರವನ್ನು ಏಕೆ ಪ್ರಶ್ನೆ ಮಾಡಲಿಲ್ಲ, ಈ ಸಮಸ್ಯೆಗೆ ಪರಿಹಾರ ಸಿಗಬೇಕೆಂದು ಅನಿಸಲಿಲ್ಲ, ಆ ಸಮಯದಲ್ಲಿ ಇದನ್ನು ಸುದ್ದಿ ಮಾಡದೆ ಅವರನ್ನೇ ವರ್ಗ ಮಾಡಲಾಗಿತ್ತು ಎಂದು ಹೇಳಿದರು.
ಜೈಲಿನ ಅಧಿಕಾರಿಗಳು ಗಮನ ಹರಿಸಬೇಕು: ಜೈಲಿನಲ್ಲಿರುವವವರು ಕ್ರಿಮಿನಲ್ ಹಿನ್ನೆಲೆಯಿಂದ ಬಂದಿರುವವರೇ ಆಗಿರುತ್ತಾರೆ. ದರ್ಶನ್ ಅವರ ಜೊತೆ ಓಡಾಡದೆ ಮತ್ತಿನ್ಯಾರ ಜೊತೆ ಓಡಾಡಬೇಕು, ಈ ಬಗ್ಗೆ ಜೈಲಿನ ಅಧಿಕಾರಿಗಳು ಗಮನ ಹರಿಸಬೇಕು. ಜೈಲಲ್ಲಿ ಜೊತೆಯಲ್ಲಿ ಕೂರಲು, ಮಾತನಾಡಲು ಮತ್ತಿನ್ಯಾರು ಸಿಗ್ತಾರೆ, ಕ್ರಿಮಿನಲ್ಸ್ ಹಿನ್ನಲೆಯುಳ್ಳವರ ಜೊತೆಯೇ ಮಾತನಾಡಬೇಕು ತಾನೇ, ಜೈಲಲ್ಲಿ ಮತ್ತಿನ್ಯಾರನ್ನೂ ಮಾತನಾಡಿಸಬಾರದು ಎಂಬ ರೀತಿಯಲ್ಲಿ ನೀವು ಹೇಳುತ್ತಿದ್ದೀರಿ ಎಂದು ಮಾಧ್ಯಮ ಪ್ರತಿನಿಧಿಗಳನ್ನೇ ಸುಮಲತಾ ಪ್ರಶ್ನಿಸಿದರು.
ಜೈಲಲ್ಲಿ ಪಾರ್ಟಿ ಮಾಡುವುದು ಖಂಡಿತಾ ತಪ್ಪು, ಅದಕ್ಕಾಗಿಯೇ ಕೆಲವೊಂದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ, ಮುಂದೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.