ಬಳ್ಳಾರಿ: ಬೆಂಗಳೂರು ಕಾರಾಗೃಹದಲ್ಲಿ ರಾಜಾತಿಥ್ಯ ನೀಡುತ್ತಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಾದವೆದ್ದು ನಟ ದರ್ಶನ್ ರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಿದ್ದನ್ನು ಬಹಿರಂಗವಾಗಿ ವಿರೋಧಿಸಿ ಕಾರಾಗೃಹದ ಅವ್ಯವಸ್ಥೆಗೆ ಕೈಗನ್ನಡಿಯೆಂಬಂತೆ ಹೇಳಿಕೆ ನೀಡಿದ್ದ ದರ್ಶನ್ ಅಭಿಮಾನಿ ಮಾಜಿ ಕೈದಿಗೆ ಸಂಕಷ್ಟ ಎದುರಾಗಿದೆ.
ನಿನ್ನೆ ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ್ದ ದರ್ಶನ್ ಅಭಿಮಾನಿ, ಅವರನ್ನು ಬಳ್ಳಾರಿ ಜೈಲಿಗೆ ಹಾಕಬಾರದಿತ್ತು, ನಾವು ದರ್ಶನ್ ಅಭಿಮಾನಿಗಳು, ಅವರನ್ನು ಬೇರೆ ಜೈಲಿಗೆ ಹಾಕಬಹುದಾಗಿತ್ತು. ಬಳ್ಳಾರಿ ಜೈಲಿನಲ್ಲಿ ಊಟ, ಸಾಂಬಾರು ಚೆನ್ನಾಗಿಲ್ಲ, ಏನೂ ಚೆನ್ನಾಗಿಲ್ಲ. ನಾನು ಈ ಜೈಲಿನಲ್ಲಿ ಆರು ವರ್ಷ ಕೈದಿಯಾಗಿದ್ದೆ ಎಂದಿದ್ದಾನೆ.
ನಮ್ಮ ಬಾಸ್ ದರ್ಶನ್ ಎಲ್ಲಿದ್ರೂ ಚೆನ್ನಾಗೇ ಇರ್ಬೇಕು, ಅವ್ರಿಗೆ ಊಟ, ತಿಂಡಿ ಚೆನ್ನಾಗಿ ನೀಡಬೇಕು, ನಮ್ಮ ಬಾಸ್ ನ್ನು ಇಲ್ಲಿ ಸಿಬ್ಬಂದಿ ಚೆನ್ನಾಗಿ ನೋಡುತ್ತಾರೋ ಇಲ್ಲವೋ ಯಾರಿಗೆ ಗೊತ್ತು. ಬೇರೆ ಬೇರೆ ಕಡೆಗಳಿಂದ ಬಂದ ರೌಡಿ ಶೀಟರ್ ಗಳು ಇಲ್ಲಿದ್ದಾರೆ. ಅವರಿಗೆ ಸ್ಪೆಷಲ್ ಊಟ, ಇತರ ಸಾಮಾನ್ಯ ಕೈದಿಗಳಿಗೆ ಇನ್ನೊಂದು ಊಟ ಎಂದು ತಾರತಮ್ಯ ಮಾಡುವುದೇಕೆ ಎಂದು ಕೇಳಿದ್ದಾನೆ.
ಪೊಲೀಸರಿಂದ ನೊಟೀಸ್ : ಜೈಲಿನಲ್ಲಿ ಎಲ್ಲ ಅಕ್ರಮ ನಡೀತವೆ: ಜೈಲಿನಲ್ಲಿ ಅಕ್ರಮಗಳು ನಡೆಯುತ್ತವೆಯೇ ಎಂದು ಕೇಳಿದಾಗ ಎಲ್ಲ ನಡೀತಿರ್ತವೆ. ಗಾಂಜಾ, ಬೀಡಿ, ಸಿಗರೇಟು ಎಲ್ಲ ಡಬಲ್ ರೇಟಿಗೆ ಮಾರ್ತಾರೆ. ವಾರ್ಡನ್, ಸೂಪರಿಂಂಟೆಂಡೆಂಟ್, ಜೈಲರ್ ಗಳೇ ಕೈದಿಗಳಿಗೆ ತಂದುಕೊಡುವುದು, ಜೈಲಲ್ಲಿ ರೊಕ್ಕ ಕೊಟ್ಟರೆ ಎಲ್ಲ ಸಿಗ್ತವೆ, ನಂತ್ರ ಕೈದಿಗಳಿಗೆ ಹೊಡೀತಾರೆ. ವಾರಕ್ಕೊಮ್ಮೆ ದುಡ್ಡು ಕೊಡಬೇಕು. ಒಳಗಡೆ ರೌಡಿ ಶೀಟರ್ ಗಳಿರ್ತಾರೆ. ಅವರು ಸೂಪರಿಂಟೆಂಡೆಂಟ್ ಹತ್ತಿರ ತಿಂಗಳಿಗೆ ಇಷ್ಟು ಕೊಡ್ತೀವಿ, ನಮಗೆ ಸ್ವಾತಂತ್ರ್ಯ ಕೊಡು ಎಂದು ಕೇಳ್ತಾರೆ ಹೀಗೆ ಯಾವುದೇ ಅಳುಕಿಲ್ಲದೆ ಮುಕ್ತವಾಗಿ ಮಾತನಾಡಿದ ಮಾಜಿ ಕೈದಿಗೆ ಈಗ ಪೊಲೀಸರು ನೊಟೀಸ್ ಜಾರಿ ಮಾಡಿ ಜೈಲಾಧಿಕಾರಿಗಳನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ.
ದರ್ಶನ್ ಗೆ ಸೆಲ್ ನಂ.15: ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸುವುದೆಂದು ನಿರ್ಧಾರವಾದ ಕೂಡಲೇ ಅಲ್ಲಿ ಸೆಲ್ ನಂಬರ್ 31ರಲ್ಲಿ ಇರಿಸಲು ನಿರ್ಧರಿಸಲಾಗಿತ್ತು. ಆದರೆ ನಂತರ ಬದಲಾಯಿಸಿ ಈಗ ಸೆಲ್ ನಂಬರ್ 15ರಲ್ಲಿ ಇರಿಸಲಾಗಿದೆ.
ಊಟ-ತಿಂಡಿ ನಿರಾಕರಿಸಿದ ನಟ: ಇಂದು ಬೆಂಗಳೂರಿನಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆತಂದ ನಟ ದರ್ಶನ್ ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಬಳ್ಳಾರಿಗೆ ಕರೆತಂದ ಬಳಿಕ ಜೈಲಿನ ಸಿಬ್ಬಂದಿ ನೀಡಿದ ಅವಲಕ್ಕಿಯನ್ನು ಸೇವಿಸಲು ನಟ ನಿರಾಕರಿಸಿದರು ಎಂದು ತಿಳಿದುಬಂದಿದೆ.