ಬೆಂಗಳೂರು: ಫೆಂಗಲ್ ಚಂಡಮಾರುತದ ಎಫೆಕ್ಟ್ ಇನ್ನಷ್ಟು ಹೆಚ್ಚಾಗಲಿದೆ. ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರದತ್ತ ಚಂಡಮಾರುತ ಪಥ ಬದಲಿಸಿದ್ದು ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಭಾನುವಾರ ಸಂಜೆಯಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಆಂತರಿಕ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದು ಬಾರಿ ಮಳೆಯಾಗಲಿದ್ದು ಮಂಗಳವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದರೆ, ಈ ಪ್ರದೇಶಗಳಲ್ಲಿ ಬುಧವಾರದಿಂದ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮತ್ತು ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಸೋಮವಾರ ಹಳದಿ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ, ಬೆಂಗಳೂರು ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ಫೆಂಗಲ್ ಪ್ರಭಾವದಿಂದ ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಭಾನುವಾರದಿಂದ ವ್ಯಾಪಕ ಮಳೆಯಾಗಿದೆ ಎಂದು ಅವರು ಹೇಳಿದರು.
ಐಎಂಡಿ ಅಧಿಕಾರಿಗಳ ಪ್ರಕಾರ, ಉಡುಪಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದ್ದು ಆರೆಂಜ್ ಅಲರ್ಟ್ ಘೋಷಿಸಿದೆ. ಆರೆಂಜ್ ಅಲರ್ಟ್ ಎಂದರೆ 11 ಸೆಂ.ಮೀ ನಿಂದ 20 ಸೆಂ.ಮೀ ವರೆಗಿನ ಭಾರೀ ಮಳೆ ಮತ್ತು ಹಳದಿ ಎಚ್ಚರಿಕೆ ಎಂದರೆ 6 ಸೆಂ.ಮೀ ಮತ್ತು 11 ಸೆಂ.ಮೀ ವರೆಗೆ ಮಳೆಯಾಗುತ್ತದೆ.
IMD ಹೇಳಿಕೆಯ ಪ್ರಕಾರ, ಡಿಸೆಂಬರ್ 2ರಂದು, ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯ ಸಾಧ್ಯತೆಯಿದೆ. ಆದರೆ ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಮೈಸೂರಿನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಡಿಸೆಂಬರ್ 2 ಮತ್ತು 3ರಂದು, ದಕ್ಷಿಣ ಕರ್ನಾಟಕ ಕರಾವಳಿಯಲ್ಲಿ ಗಾಳಿಯ ವೇಗ ಗಂಟೆಗೆ 35 ಕಿಲೋಮೀಟರ್‌ನಿಂದ 45 ಕಿಮೀ ಅಥವಾ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದ್ದು ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ.
ಡಿಸೆಂಬರ್ 3ಕ್ಕೆ ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಕೊಡಗು, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಉತ್ತರ ಕರಾವಳಿ ತಮಿಳುನಾಡು ಮತ್ತು ಪುದುಚೇರಿಯಲ್ಲಿನ ಫೆಂಗಾಲ್ ಚಂಡಮಾರುತ ಪಶ್ಚಿಮಕ್ಕೆ ಚಲಿಸಿದ್ದು ದುರ್ಬಲಗೊಂಡಿದೆ ಎಂದು IMD ಹೇಳಿಕೆಯಲ್ಲಿ ತಿಳಿಸಿದೆ.