ಕುಸಿದ ಮನೆ 
ರಾಜ್ಯ

Fengal Cyclone: ಚಾಮರಾಜಪೇಟೆಯಲ್ಲಿ ಹಳೆಯ ಮನೆ ಕುಸಿತ; ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರು!

ಪುದುಚೇರಿ ಮತ್ತು ಉತ್ತರ ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತವು ಕರ್ನಾಟಕದ ರಾಜಧಾನಿ ಬೆಂಗಳೂರಿನ ಮೇಲೂ ವ್ಯಾಪಕ ಪರಿಣಾಮ ಬೀರುತ್ತಿದ್ದು, ಶನಿವಾರ ಮಧ್ಯರಾತ್ರಿಯಿಂದ ಸತತ ಮಳೆಯಾಗುತ್ತಿದೆ.

ಬೆಂಗಳೂರು: ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಅಬ್ಬರಿಸುತ್ತಿರುವ ಫೆಂಗಲ್ ಮಾರುತದ ಪ್ರಭಾವ ಕರ್ನಾಟಕದ ಮೇಲೂ ಆಗುತ್ತಿದ್ದು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮಳೆ ಪರಿಣಾಮ ಸುಮಾರು 70 ವರ್ಷದ ಹಳೆಯ ಮನೆ ಕುಸಿತವಾಗಿದೆ.

ಹೌದು.. ಪುದುಚೇರಿ ಮತ್ತು ಉತ್ತರ ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತವು ಕರ್ನಾಟಕದ ರಾಜಧಾನಿ ಬೆಂಗಳೂರಿನ ಮೇಲೂ ವ್ಯಾಪಕ ಪರಿಣಾಮ ಬೀರುತ್ತಿದ್ದು, ಶನಿವಾರ ಮಧ್ಯರಾತ್ರಿಯಿಂದ ಸತತ ಮಳೆಯಾಗುತ್ತಿದೆ.

ಪರಿಣಾಮ ಬೆಂಗಳೂರಿನ ಚಾಮರಾಜಪೇಟೆಯ 70 ವರ್ಷಗಳ ಹಳೆಯ ಮನೆಯೊಂದು ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಚಾರ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಮತ್ತು ಬಿಬಿಎಂಪಿ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ವೃದ್ದ ದಂಪತಿಯ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಾದ್ಯಂತ ವ್ಯಾಪಕ ಮಳೆ

ಇನ್ನು ಚಂಡಮಾರುತ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಕೃಷ್ಣ ರಾಜೇಂದ್ರ ಮಾರುಕಟ್ಟೆ, ಚಿಕ್ಕಪೇಟೆ, ಸುಲ್ತಾನ್‌ಪೇಟೆ, ಬಳೇಪೇಟೆ, ಕಾಟನ್‌ಪೇಟೆ, ವಿಜಯನಗರ, ಕಾಮಾಕ್ಷಿಪಾಳ್ಯ, ಮೆಜೆಸ್ಟಿಕ್, ಮೈಸೂರು ರಸ್ತೆ, ಬಸವನಗುಡಿ, ಜೆ.ಪಿ.ನಗರ, ಮಲ್ಲೇಶ್ವರ, ಜೆ.ಸಿ.ರಸ್ತೆ, ವಿಶ್ವೇಶ್ವರಯ್ಯಪುರ, ವಿದ್ಯಾಪೀಠ, ಯಲಹಂಕ, ವಿ.ಆರ್.ನಗರ, ವಿ.ಆರ್. ನಾಗೇನಹಳ್ಳಿ, ಪುಲಿಕೇಶಿನಗರ, ಅರಕೆರೆ, ಎಚ್‌ಎಸ್‌ಆರ್‌ ಲೇಔಟ್‌, ನಾಗಪುರ, ಕಾಟನ್‌ಪೇಟೆ, ಚಾಮರಾಜಪೇಟೆ, ಬಿಟಿಎಂ ಲೇಔಟ್‌, ಹೂಡಿ, ಸಿಲ್ಕ್‌ ಬೋರ್ಡ್‌, ಹೆಬ್ಬಾಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ.

ಇನ್ನು ಈ ಪ್ರದೇಶಗಳಲ್ಲಿ ಬಿಬಿಎಂಪಿ ಪೌರಕಾರ್ಮಿಕ ಕಾಮಗಾರಿಗಳು ಕೈಗೆತ್ತಿಕೊಂಡಿರುವುದರಿಂದ ವಾಹನ ದಟ್ಟಣೆ ಮಂದಗತಿಯಲ್ಲಿ ಸಾಗಿದ್ದು, ನಿವಾಸಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.

ಇಂದು ಸೋಮವಾರ ವಾರದ ಮೊದಲ ದಿನವಾಗಿದ್ದು, ಎಚ್ಚರಿಕೆ ನೀಡಿದರೂ ಸಂಬಂಧಪಟ್ಟ ಇಲಾಖೆ ರಜೆ ಘೋಷಿಸದ ಕಾರಣ ಕಚೇರಿ ಸಿಬ್ಬಂದಿ, ಕಾಲೇಜು, ಶಾಲಾ ವಿದ್ಯಾರ್ಥಿಗಳು ಪರದಾಡಿದರು. ಆದರೆ ಹೆಚ್ಚಿನ ಪರಿಣಾಮ ಉಂಟಾಗಿಲ್ಲವಾದರೂ ಜನಜೀವನ ಅಸ್ಥವ್ಯಸ್ಥಗೊಂಡಿದೆ.

ಇತ್ತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾತ್ರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ತಿಳಿಸಿದ್ದಾರೆ. ಇದಲ್ಲದೆ, ವಯಸ್ಸಾದವರು ಮತ್ತು ಮಕ್ಕಳಂತಹ ರಾಜಿ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಶೀತ, ಜ್ವರ ಮತ್ತು ಕೆಮ್ಮಿನ ಬಗ್ಗೆ ದೂರುತ್ತಿದ್ದು, ವೈದ್ಯರ ಬಳಿ ಧಾವಿಸುತ್ತಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಬಗ್ಗೆ ಮಾತನಾಡಿದ್ದು, 'ಈಗಾಗಲೇ ತಗ್ಗು ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಇನ್ನು ಮಳೆಯಿಂದಾಗಿ ಹಲವೆಡೆ ಮರಕಡಿತ ಪ್ರಕರಣಗಳು ವರದಿಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿಯ 28 ಮರ ಕಡಿಯುವ ತಂಡಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಅಂತೆಯೇ ಜಾಗರೂಕರಾಗಿರಲು ಬಿಬಿಎಂಪಿ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಮರಗಳು ಬುಡಸಮೇತ ಉರುಳಿದರೆ ಅಥವಾ ಕೊಂಬೆಗಳು ಬಿದ್ದರೆ ಅದನ್ನು ಪತ್ತೆ ಹಚ್ಚಿ ಕೂಡಲೇ ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಆಟೋ ಪ್ರಯಾಣಿಕರಿಂದ ಸುಲಿಗೆ

ಈ ನಡುವೆ ಬೆಂಗಳೂರಿನಲ್ಲಿ ಕೆಲ ಆಟೋ ಚಾಲಕರು ನಗರದಲ್ಲಿ ಸುರಿಯುತ್ತಿರುವ ಮಳೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದು, ಪ್ರಯಾಣಿಕರಿಂದ ದುಬಾರಿ ಶುಲ್ಕ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಗರದಲ್ಲಿ ದಿನವಿಡೀ ಸುರಿದ ಮಳೆಯಿಂದಾಗಿ ಆಟೋ, ಟ್ಯಾಕ್ಸಿ ದರಗಳು ಏಕಾಏಕಿ ದುಪ್ಪಟ್ಟಾಗಿದೆ. ಆಟೋ ಮತ್ತು ಟ್ಯಾಕ್ಸಿ ಚಾಲಕರು 100 ದರಕ್ಕೆ 250ರವರೆಗೆ ಬೇಡಿಕೆ ಇಟ್ಟಿದ್ದಾರೆ. ಮಳೆಯಿಂದಾಗಿ ಪ್ರಯಾಣಿಕರು ಬೇರೆ ದಾರಿಯಿಲ್ಲದೆ ಹೆಚ್ಚು ಹಣ ನೀಡಿ ಪ್ರಯಾಣಿಸಿದರು. ಕೆಲವೆಡೆ ಕಾಯ್ದಿರಿಸಿದ ದರಕ್ಕಿಂತ ಹೆಚ್ಚಿನ ಹಣ ನೀಡಬೇಕಾಗಿದೆ ಎಂದು ನಾಗರಿಕರು ದೂರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT