ತುಮಕೂರಿನ ಸೋರೆಕುಂಟೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ಈ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಕ್ರೀಡಾಂಗಣ ನಿರ್ಮಾಣಕ್ಕಾಗಿ KSCAಗೆ ಸಿಎಂ ಸಿದ್ದರಾಮಯ್ಯ 50 ಎಕರೆ ಪ್ರದೇಶವನ್ನು ಹಸ್ತಾಂತರಿಸಿದ್ದಾರೆ. ನಂತರ ಮಾತನಾಡಿದ ಸಿದ್ದರಾಮಯ್ಯ, ಜಿಲ್ಲೆಯ ಅಭಿವೃದ್ಧಿಗೆ ಈ ಯೋಜನೆಯು ಮತ್ತಷ್ಟು ಕೊಡುಗೆ ನೀಡುತ್ತದೆ ಎಂದು ಹೇಳಿದರು. ಕ್ರಿಕೆಟ್ ಆಸಕ್ತರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಎಸ್‌ಸಿಎ ನಿರ್ಮಾಣವನ್ನು ತ್ವರಿತಗೊಳಿಸಬೇಕು. ಅಲ್ಲದೆ ಮೈಸೂರಿನಲ್ಲೂ ಇದೇ ಯೋಜನೆಗೆ ಭೂಮಿ ಮಂಜೂರು ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಬಂಡಾಯ ಸಾರಿ ಅವರ ವಿರುದ್ಧ ಟೀಕೆಗಳನ್ನು ಮಾಡಿದ್ದ ಹಿರಿಯ ಶಾಸಕ ಬಸನಗೌಡಪಾಟೀಲ್ ಯತ್ನಾಳ್‌ಗೆ ಬಿಜೆಪಿ ಹೈಕಮಾಂಡ್ ಕೊನೆಗೂ ಶೋಕಾಸ್ ನೋಟಿಸ್ ಜಾರಿ ಮಾಡಿ, ಚುರುಕು ಮುಟ್ಟಿಸಿದೆ. ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಬಂಡಾಯ ಎದ್ದು, ಪ್ರತ್ಯೇಕವಾಗಿ ವಕ್ಫ್ ವಿರುದ್ಧ ಅಭಿಯಾನ ನಡೆಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂಪಾಠಕ್ ಶೋಕಾಸ್ ನೋಟಿಸ್ ಜಾರಿ ಮಾಡಿ 10 ದಿನಗಳೊಳಗೆ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ. ಆದರೆ ಈ ನೋಟಿಸ್ ಅನ್ನೇ ನಕಲಿ ಎಂದು ಹೇಳಿರುವ ಯತ್ನಾಳ್, ನನಗೆ ಈವರೆಗೂ ಅಧಿಕೃತವಾಗಿ ಪಕ್ಷದ ಕೇಂದ್ರ ಸಮಿತಿಯಿಂದ ನೊಟೀಸ್ ಬಂದಿಲ್ಲ, ವಾಟ್ಸ್ ಆಪ್ ನಲ್ಲಿ ನೊಟೀಸ್ ಬಂದಿದೆ. ವಾಟ್ಸ್ ಆಪ್ ನಲ್ಲಿ ಬಂದಿರುವುದನ್ನು ಹೇಗೆ ನಂಬಲಿ? ವಿಜಯೇಂದ್ರನೇ ನಕಲಿ ನೊಟೀಸ್ ಮಾಡಿಸಿದ್ದಾನೆ ಎನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರದ ಕಡೆಗೆ ಫೆಂಗಲ್ ಚಂಡಮಾರುತ ಪಥ ಬದಲಿಸಿರುವುದರಿಂದ ಕರ್ನಾಟಕ-ಕೇರಳ ಗಡಿಯಲ್ಲಿ ಭಾರೀ ಮಳೆಯಾಗುತ್ತಿದೆ. ಉಡುಪಿ ಮತ್ತು ಮಂಗಳೂರಿನಲ್ಲಿ ಕೆರೆ, ನದಿ, ಸಮುದ್ರ ತೀರಗಳಿಗೆ ಇಳಿಯದಂತೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಪ್ರಕೃತಿ ವಿಕೋಪ ಉಂಟಾದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ಮಂಗಳೂರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಫೆಂಗಲ್ ಚಂಡಮಾರುತದಿಂದ ಹಲವು ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು, ಮುಂಜಾಗ್ರಾತಾ ಕ್ರಮವಾಗಿ ನಾಳೆ ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ರಜೆ ನೀಡಲಾಗಿಲ್ಲ.
ಖಾಸಗಿ ಬಸ್ಸೊಂದು ರಸ್ತೆ ಪಕ್ಕದಲ್ಲಿರುವ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿ, 20 ಮಂದಿ ಗಾಯಗೊಂಡಿರುವ ಘಟನೆ ತುಮಕೂರಿನ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ದೆಹಲಿ ಮೂಲದ ಪತ್ರಕರ್ತೆ ಊರ್ವಿ ನಯನ್, ಪ್ರಿಯಾಂಕ ಹಾಗೂ ಶುಬಾಳಿ ಸಿಂಗ್ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಹಾಸನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ರಸ್ತೆ ಬದಿಗೆ ಉರುಳಿದ ಪರಿಣಾಮ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಬಿಹಾರ ಮೂಲದ ಹರ್ಷವರ್ಧನ್ ಎಂಬುವರು ಮೃತಪಟ್ಟಿದ್ದಾರೆ. ಕರ್ನಾಟಕ ಕೇಡರ್‌ನಲ್ಲಿ ಆಯ್ಕೆಯಾಗಿದ್ದ ಹರ್ಷವರ್ಧನ್ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಯಿಂದ ಹಾಸನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಇಂದು ವರದಿ ಮಾಡಿಕೊಳ್ಳಬೇಕಿತ್ತು. ಇದಕ್ಕಾಗಿ ನಿನ್ನೆ ತೆರಳುತ್ತಿದ್ದ ವೇಳೆ ಕಿತ್ತಾನೆ ಗಡಿ ಭಾಗದಲ್ಲಿ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ಮಂಚದ ಮೇಲೆ ಮಲಗಿರುವ ಫೋಟೋ ವೈರಲ್ ಆಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ದರ್ಶನ್ ಅವರಿಗೆ ಅಪಾರವಾದ ಬೆನ್ನು ನೋವು ಕಾಡಿತ್ತು. ಹೀಗಾಗಿ ಅವರಿಗೆ ಚಿಕಿತ್ಸೆ ಪಡೆಯಲು ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು ಅಕ್ಟೋಬರ್ 30ರಂದು ದರ್ಶನ್ ಜೈಲಿನಿಂದ ಹೊರಬಂದಿದ್ದರು. ಒಟ್ಟು 42 ದಿನಗಳ ಮಧ್ಯಂತರ ಜಾಮೀನಿನಲ್ಲಿ ಈಗಾಗಲೇ 33 ದಿನಗಳು ಕಳೆದಿವೆ. ಇನ್ನು 9 ದಿನಗಳು ಬಾಕಿ ಇದ್ದು, ಆ ಬಳಿಕ ಜೈಲಿಗೆ ಮರಳಬೇಕಿದೆ.