ಬೆಳಗಾವಿ: ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದಾರೆ ಎಂದು ಕ್ರೋಧಗೊಂಡ ಪ್ರಿಯಕರನೊಬ್ಬ ಪ್ರೇಯಸಿಯ ತಾಯಿ ಮತ್ತು ಆಕೆಯ ಮಗನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಹೊರ ವಲಯದ ತೋಟದ ಮನೆಯಲ್ಲಿ ನೆಲೆಸಿದ್ದ 45 ವರ್ಷದ ತಾಯಿ ಮಂಗಲ ನಾಯಿಕ ಮತ್ತು ಪುತ್ರ 18 ವರ್ಷದ ಪ್ರಜ್ವಲ್ ನಾಯಿಕ ನನ್ನು ಆರೋಪಿ ರವಿ ಖಾನಾಪಗೋಳ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ನಿನ್ನೆ ರಾತ್ರಿ ರವಿ ಖಾನಪಗೋಳ ತನ್ನ ಸ್ನೇಹಿತ ಲೋಕೇಶ್ ನಾಯಿಕ ಎಂಬಾತನ ಜೊತೆಗೆ ಬಂದು ಪ್ರೇಯಸಿಯ ತಾಯಿಯ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಾನೆ. ಇದನ್ನು ಕಂಡು ತಾಯಿಯನ್ನು ರಕ್ಷಿಸಿಕೊಳ್ಳಲು ಮುಂದಾದ ಪ್ರಜ್ವಲ್ ನಾಯಿಕ ನನ್ನು ರವಿ ಖಾನಪಗೋಳ ಬರ್ಬರವಾಗಿ ಹತ್ಯೆ ಮಾಡಿದ್ದನು.
ಕೊಲೆ ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ನಿಪ್ಪಾಣಿ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು. ಅಲ್ಲದೆ ಗ್ರಾಮಸ್ಥರ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಮಂಗಲ ನಾಯಿಕ ಪುತ್ರಿಯನ್ನು ರವಿ ಪ್ರೀತಿಸುತ್ತಿದ್ದ. ಆದರೆ ಇದಕ್ಕೆ ಮಂಗಲ ವಿರೋಧಿಸಿದ್ದರು. ಇದರಿಂದ ಕೋಪಗೊಂಡು ಇಬ್ಬರನ್ನು ಹತ್ಯೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.