ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆದ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿ, ಈಗಾಗಲೇ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಆಗಿದೆ. ಇನ್ನೂ 3 ಲಕ್ಷ ರೂಪಾಯಿ ನೀಡುವುದಾಗಿ ಎಂದು ಹೇಳಿದರು. ಬಳ್ಳಾರಿ ಬಿಮ್ಸ್ನಲ್ಲಿ ಐವರು ಬಾಣಂತಿಯರು ಮೃತಪಟ್ಟಿರುವ ಘಟನೆ ದುರದೃಷ್ಟಕರ. ಮೃತ ಬಾಣಂತಿಯರೆಲ್ಲರೂ ಬಡ ಕುಟುಂಬದವರು. ಹೀಗಾಗಿ, ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ ಎಂದು ಹೇಳಿದರು. ಬಳ್ಳಾರಿ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಡಿಹೆಚ್‌ಒ, ಜಿಲ್ಲಾ ಸರ್ಜನ್‌ರಿಂದ ಮಾಹಿತಿ ಪಡೆದುಕೊಂಡರು. ಬಾಣಂತಿಯರ ದಿಢೀರ್ ಸಾವಾಗಿದೆ, ವೈದ್ಯರ ಮೂಲಕ ವರದಿ ಕೇಳಿದ್ವಿ. ಐವಿ ಫ್ಲ್ಯೂಯೆಡ್ ಬಗ್ಗೆ ಅನುಮಾನವಿತ್ತು, ಲ್ಯಾಬ್‌ನಲ್ಲಿ ಟೆಸ್ಟ್ ಮಾಡಲಾಗಿತ್ತು. ಲ್ಯಾಬ್‌ನಲ್ಲಿ ಟೆಸ್ಟ್ ಬಳಿಕ ಐವಿ ಬಳಕೆ ನಿಷೇಧ ಮಾಡಲಾಗಿದೆ ಎಂದರು.
ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ದುಪ್ಪಟ್ಟು ಹಣ ನೀಡುವಂತೆ ವಿದ್ಯಾರ್ಥಿಗೆ ಬೆದರಿಕೆ ಹಾಕಿ, ದರ್ಪ ತೋರಿರುವ ಘಟನೆ ನಡೆದಿದೆ. ಖಾಸಗಿ ಕಂಪೆನಿಯೊಂದರಲ್ಲಿ ಇಂಟರ್ನ್ಶಿಪ್ ಮುಗಿಸಿ ವಾಪಸ್ ಆಗುವ ವೇಳೆ 20 ವರ್ಷದ ವಿದ್ಯಾರ್ಥಿ ನಮ್ಮ ಯಾತ್ರಿ ಆ್ಯಪ್ ಮೂಲಕ ಬೆಳ್ಳಂದೂರಿನಿಂದ ಮೈಲಸಂದ್ರಕ್ಕೆ ಆಟೋ ಬುಕ್ ಮಾಡಿದ್ದನು. ಈ ವೇಳೆ ಆ್ಯಪ್ ನಲ್ಲಿ 380 ರೂಪಾಯಿ ತೋರಿಸಿದೆ. ಚಾಲಕ 50 ರೂಪಾಯಿ ಹೆಚ್ಚಾಗಿ ನೀಡುವಂತೆ ಕೇಳಿದ್ದು ಅದಕ್ಕೆ ಒಪ್ಪಿದ ವಿದ್ಯಾರ್ಥಿ, ಆಟೋ ಹತ್ತಿ ಮನೆಗೆ ಬಂದಿದ್ದಾನೆ. ನಂತರ ವಿದ್ಯಾರ್ಥಿ 430 ರೂಪಾಯಿ ನೀಡಲು ಮುಂದಾದಾಗ ಚಾಲಕ 500 ರೂಪಾಯಿ ನೀಡುವಂತೆ ಕೇಳಿದ್ದಾನೆ. ಇದಕ್ಕೆ ವಿದ್ಯಾರ್ಥಿ ನಿರಾಕರಿಸಿದ್ದನು. ಈ ವೇಳೆ ಚಾಲಕ ಆತನಿಗೆ ಅವ್ಯಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದರಿಂದ ಹೆದರಿದ ವಿದ್ಯಾರ್ಥಿ 500 ರೂಪಾಯಿ ಕೊಟ್ಟು ಹೋಗಿದ್ದು ತನಗಾದ ಅನುಭವವನ್ನು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಕೋಲಾರ ಹಾಲು ಒಕ್ಕೂಟದಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ ಎಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಮಾಲೂರು ಕಾಂಗ್ರೆಸ್ ಶಾಸಕ, ಕೋಲಾರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣ ಹಾಗೂ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬರುತ್ತಿದೆ. ಎಂವಿಕೆ ಡೈರಿ ಗುತ್ತಿಗೆ ಆಗಿರುವುದು ಒಬ್ಬರಿಗೆ. ಆದರೆ ಕೆಲಸ ಮಾಡುತ್ತಿರುವವರೇ ಬೇರೆ. ಸಾಮಗ್ರಿ ಸರಬರಾಜು ಮಾಡುತ್ತಿರುವವರು ಮತ್ಯಾರೋ. ಎಲ್ಲಾ ಕಾಮಗಾರಿಗಳು ಒಂದೇ ಕುಟುಂಬದಿಂದ ನಡೆಯುತ್ತಿದೆ. ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿ ಬರುತ್ತಿದ್ದು ಈ ಬಗ್ಗೆ ಸರ್ಕಾರಕ್ಕೆ ದೂರು ನೀಡಲಾಗುವುದು ಎಂದು ನಾರಾಯಸ್ವಾಮಿ ಸ್ವಪಕ್ಷದ ಶಾಸಕನ ವಿರುದ್ದವೇ ಆರೋಪ ಮಾಡಿದ್ದಾರೆ.
ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ ಮತ್ತು ಮೂವರು ಮಕ್ಕಳು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮಂಜನಾಡಿಯ ಖಂಡಿಕದಲ್ಲಿ ನಡೆದಿದೆ. ಖಂಡಿಕ ಪ್ರದೇಶದ ಮುತ್ತಲಿಬ್ ಎಂಬುವರ ಮನೆಯಲ್ಲಿ ಮಧ್ಯರಾತ್ರಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಚಾವಣಿ ಹಾರಿಹೋಗಿದ್ದು ತಾಯಿ ಮತ್ತು ಮೂವರು ಮಕ್ಕಳು ಮಲಗಿದ್ದ ಮಂಚ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಇನ್ನು ಗಾಯಾಳುಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಂದಾನಗರಿ ಬೆಳಗಾವಿ ವಿಧಾನಸೌಧದಲ್ಲಿ ನಾಳೆಯಿಂದ ಹತ್ತು ದಿನಗಳ ಕಾಲ ವಿಧಾನ ಮಂಡಲ ಚಳಿಗಾಲದ ಅಧಿವೇಶನ ನಡೆಯಲಿದೆ. ಮುಡಾ, ವಾಲ್ಮೀಕಿ ನಿಗಮ, ವಕ್ಪ್ ಆಸ್ತಿ ವಿವಾದ, ಬಾಣಂತಿಯರ ಸಾವು ಪ್ರಕರಣ ಹೀಗೆ ಹಲವು ಅಸ್ತ್ರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಮೇಲೆ ಮುಗಿಬೀಳಲು ವಿರೋಧ ಪಕ್ಷ ಬಿಜೆಪಿ ಸಜ್ಜಾಗಿದೆ. ಬಿಜೆಪಿ ಅಸ್ತ್ರಗಳಿಗೆ ಕಾಂಗ್ರೆಸ್ ಕೊರಾನಾ ಅಸ್ತ್ರ ಜೊತೆಗೆ ಯತ್ನಾಳ್ ಬಣ ಬಡಿದಾಟವನ್ನು ತಿರುಗುಬಾಣವಾಗಿ ಬಿಡಲು ಸಜ್ಜಾಗಿದೆ. ಅಧಿವೇಶನ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣಸೌಧಕ್ಕೆ ಸ್ಪೀಕರ್ ಯು ಟಿ ಖಾದರ್ ಮತ್ತು ಸಭಾಪತಿ ಬಸವರಾಜ ಹೊರಟ್ಟಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 6 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಜಿಲ್ಲಾಡಳಿತ ಸಹಯೋಗದಿಂದ ಸುಮಾರು 10 ಕಮಿಟಿ ರಚಿಸಲಾಗಿದೆ. ಪ್ರತಿಭಟನೆ ಮಾಡುವವರಿಗೂ ಬೇಕಾದ ವ್ಯವಸ್ಥೆ ಮಾಡಲಾಗಿದೆ.