ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರ್ಚ್ 22, 2023, ಬುಧವಾರದಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರಿಗೆ ಪದ್ಮವಿಭೂಷಣವನ್ನು ಪ್ರದಾನ ಮಾಡಿದರು. Photo | PTI
ರಾಜ್ಯ

SM Krishna: ಬೆಂಗಳೂರನ್ನು ಐಟಿ ಸಿಟಿʼಯಾಗಿ ಮಾರ್ಪಡಿಸಿದ ಮುತ್ಸದ್ಧಿ; ಸಿಂಗಾಪುರ ಮಾಡುವ ಕನಸು ಕಂಡ ರಾಜಕಾರಣಿ

ಭೀಕರ ಬರಗಾಲ, ಡಾ. ರಾಜ್ ಕುಮಾರ್ ಅಪಹರಣದಂತಹ ಸಂದಿಗ್ಧ ಸ್ಥಿತಿಯಲ್ಲಿ ರಾಜ್ಯವನ್ನು ಆಳ್ವಿಕೆ ಮಾಡಿದ್ದ ಹೆಗ್ಗಳಿಕೆ ಎಸ್‌ಎಂ ಕೃಷ್ಣ ಅವರದು.

ಬೆಂಗಳೂರು: ಕರ್ನಾಟಕ ಮಾಜಿ ಮುಖ್ಯಮಂತ್ರಿ, ಮುತ್ಸದ್ದಿ ರಾಜಕಾರಣಿ ಎಸ್​​ಎಂ ಕೃಷ್ಣ ಇನ್ನಿಲ್ಲ. ಈ ಮೂಲಕ ಕರ್ನಾಟಕ ರಾಜಕಾರಣದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಎಸ್.ಎಂ. ಕೃಷ್ಣ ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸಿನೊಂದಿಗೆ ಸಿಲಿಕಾನ್ ಸಿಟಿಯಾಗಲು ಪ್ರಮುಖ ಕೊಡುಗೆ ನೀಡಿದ್ದರು.

ಭೀಕರ ಬರಗಾಲ, ಡಾ. ರಾಜ್ ಕುಮಾರ್ ಅಪಹರಣದಂತಹ ಸಂದಿಗ್ಧ ಸ್ಥಿತಿಯಲ್ಲಿ ರಾಜ್ಯವನ್ನು ಆಳ್ವಿಕೆ ಮಾಡಿದ್ದ ಹೆಗ್ಗಳಿಕೆ ಎಸ್‌ಎಂ ಕೃಷ್ಣ ಅವರದು. ಕಾಂಗ್ರೆಸ್​ನಿಂದ ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲರಾಗಿದ್ದ ಕೃಷ್ಣ ಅವರು,ಬದಲಾದ ರಾಜಕೀಯ ಸ್ಥಿತ್ಯಂತರದ ನಡುವೆ ಬಿಜೆಪಿ ಸೇರಿ ರಾಜಕೀಯ ನಿವೃತ್ತಿ ಘೋಷಿಸಿದ್ದರು.

1932ರ ಮೇ 1 ರಂದು ಎಸ್.ಸಿ. ಮಲ್ಲಯ್ಯ ಮತ್ತು ತಾಯಮ್ಮ ದಂಪತಿ ಪುತ್ರರಾಗಿ ಸೋಮನಹಳ್ಳಿಯಲ್ಲಿ ಜನಿಸಿದ ಎಸ್.ಎಂ.ಕೃಷ್ಣ ಅವರು, ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದಿದರು. ಬಳಿಕ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ವಾಷಿಂಗ್ಟನ್​ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್‍ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದುಕೊಂಡರು. ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ರೇಣುಕಾಚಾರ್ಯ ಲಾ ಕಾಲೇಜಿನಲ್ಲಿ ಕಾನೂನು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.

ಬಳಿಕ ಅಮೆರಿಕ ಮಾಜಿ ಅಧ್ಯಕ್ಷ ಜಾನ್‌ ಎಫ್‌ ಕೆನಡಿ ಪ್ರಭಾವದಿಂದಾಗಿ ಎಸ್‌ಎಂ ಕೃಷ್ಣ ಅವರು ರಾಜಕೀಯ ರಂಗ ಪ್ರವೇಶ ಮಾಡಿದ್ದರು. 1950 ರಂದು ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿ ಪಡೆದ ನಂತರ 1955 ರಲ್ಲಿ ಬೆಂಗಳೂರಿನ ಲಾ ಕಾಲೇಜಿನಲ್ಲಿ ಕೃಷ್ಣ ಬಿ.ಎಲ್ ಪದವಿ ಪಡೆದರು. ಬಳಿಕ ಆ ಕಾಲದ ಹೆಸರಾಂತ ವಕೀಲರಾದ ಗಣೇಶರಾಯರ ಬಳಿ ಜೂನಿಯರ್ ಆಗಿ ಸೇರಿದ್ದರು. 1958 ರಲ್ಲಿ ಉನ್ನತ ವ್ಯಾಸಂಗಕ್ಕೆ ಕೃಷ್ಣ ಅವರು ಅಮೆರಿಕಗೆ ತೆರಳುತ್ತಾರೆ. ಅಲ್ಲಿನ ಟೆಕ್ಸಾಸ್‌ನ ಡಲ್ಲಾಸ್ ನಗರದ ಸದರನ್ ಮೆಥಾಡಿಸ್ಟ್ ವಿವಿಯಲ್ಲಿ ಎಂ.ಸಿ.ಎಲ್ ಪದವಿ ಪಡೆಯುತ್ತಾರೆ. ನಂತರ ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿಗೆ ಸೇರಿದರೂ ಅವರು ಪೂರ್ಣಗೊಳಿಸುವುದಿಲ್ಲ.

ಈ ಸಂದರ್ಭದಲ್ಲಿ ಜಾನ್.ಎಫ್.ಕೆನಡಿ ಅವರ ಪ್ರಭಾವಕ್ಕೆ ಕೃಷ್ಣ ಅವರು ಒಳಗಾಗುತ್ತಾರೆ. 1960 ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಯುವ ರಾಜಕಾರಣಿ ಕೆನಡಿ ಸ್ಪರ್ಧಿಸಿದ್ದ ವೇಳೆ ಅವರ ಪರ ಕೃಷ್ಣ ಅವರು ಪ್ರಚಾರ ನಡೆಸಿದ್ದರು. ಚುನಾವಣೆಯಲ್ಲಿ ಜಯಗಳಿಸಿದ ನಂತರ ಕೆನಡಿ ಅವರು ಎಸ್‌ಎಂ ಕೃಷ್ಣ ಅವರಿಗೆ ಧನ್ಯವಾದ ಪತ್ರವನ್ನ ಕೂಡ ಬರೆದಿದ್ದರು.

1961 ರಂದು ಕೃಷ್ಣ ಅವರು ಅಮೆರಿಕದಿಂದ ಉನ್ನತ ವ್ಯಾಸಂಗ ಮುಗಿಸಿ ಭಾರತಕ್ಕೆ ಮರಳಿದ್ದರು. ಅಲ್ಲಿಂದ ಬಂದವರೇ 1962ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿದ್ದರು. ಹಲವಾರು ಬಾರಿ ಎಂಸ್‌ಎಂ. ಕೃಷ್ಣ ಅವರು ಕೆನಡಿ ತಮ್ಮ ರಾಜಕೀಯ ಗುರು ಎಂದೂ ಹೇಳಿಕೊಂಡಿದ್ದರು.

ಕೆನಡಿ ಅವರು ಬರೆದಿರುವ ಪತ್ರವನ್ನು ಎಸ್ಎಂ.ಕೃಷ್ಣ ಅವರ ಆತ್ಮಚರಿತ್ರೆ ಕೃಷ್ಣ ಪಥದಲ್ಲಿ ಪುಸ್ತಕದಲ್ಲಿ ಲಗತ್ತಿಸಲಾಗಿದೆ. ಪತ್ರದಲ್ಲಿ ಮಾಜಿ ಅಧ್ಯಕ್ಷ ಜಾನ್‌ ಎಫ್‌ ಕೆನಡಿ ಅವರು 'ಡೆಮಾಕ್ರಟಿಕ್ ಪಕ್ಷದ ಪರವಾಗಿ ನೀವು ಮಾಡಿದ ಅತ್ಯುತ್ತಮ ಕೆಲಸಕ್ಕಾಗಿ ನಾನು ವೈಯಕ್ತಿಕವಾಗಿ ಧನ್ಯವಾದ ಹೇಳಲು ಸಾಧ್ಯವಾಗಲಿಲ್ಲ, ಕ್ಷಮಿಸಿ. ನಿಮ್ಮ ಪ್ರಯತ್ನ ಮತ್ತು ನಿಷ್ಠೆ ಇಲ್ಲದಿದ್ದರೆ ಕಳೆದ ನವೆಂಬರ್ 8 ರಂದು ಗೆಲುವು ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದಿರುವುದು ಕಂಡು ಬಂದಿದೆ.

ಕೆನಡಿ ಬರೆದಿರುವ ಪತ್ರ

ಅಮೆರಿಕಾದಿಂದ ಬಳಿಕ ಭಾರತಕ್ಕೆ ಮರಳಿದ್ದ ಎಸ್‌ಎಂ ಕೃಷ್ಣ ಅವರು 1962ರ ಚುನಾವಣೆಯಲ್ಲಿ ಮದ್ದೂರಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ಆದರೆ, 1967 ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದರು. ನಂತರ 1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಚುನಾಯಿತರಾದರು. 1971ರಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದು ಮಂಡ್ಯದಿಂದ ಮರು ಚುನಾಯಿತರಾಗಿ, 1972 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾಯಿತರಾದರು. ಇದೇ ಸಮಯದಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. 1980 ರಲ್ಲಿ ಮತ್ತೆ ಮಂಡ್ಯ ಸಂಸದರಾದರು. ಆದರೆ. 1984 ರಲ್ಲಿ ಮಂಡ್ಯದಲ್ಲಿ ಸೋಲನ್ನನುಭವಿಸಿದರು.

1983ರಲ್ಲಿ ಕೇಂದ್ರ ಉದ್ಯಮ ಖಾತೆ ಮತ್ತು ರಾಜ್ಯ ಸಚಿವರಾಗಿ ಮತ್ತು 1984 ರಲ್ಲಿ ಕೇಂದ್ರ ವಿತ್ತ ಖಾತೆಯ ರಾಜ್ಯ ಸಚಿವರಾದರು. 1989 ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದ ಕೃಷ್ಣ 1992ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಿತರಾಗಿದ್ದರು. 1993 ರಿಂದ 1994ರ ವರೆಗೆ ಕರ್ನಾಟಕದ ಉಪ-ಮುಖ್ಯಮಂತ್ರಿಗಳಾದರು. 1995ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಸ್ಎಂ ಕೃಷ್ಣ ಸೋಲು ಅನುಭವಿಸಬೇಕಾಯಿತು. ಆ ವೇಳೆ ರಾಜಕೀಯದಲ್ಲಿ ಉನ್ನತ ಮಟ್ಟದಲ್ಲಿದ್ದ ಕೃಷ್ಣ ಅವರ ಸೋಲು ವ್ಯಾಪಕ ಚರ್ಚೆಗೆ ಸಹ ಕಾರಣವಾಗಿತ್ತು. 1996ರಲ್ಲಿ ರಾಜ್ಯಸಭೆಗೆ ನೇಮಕಗೊಂಡ ಕೃಷ್ಣ, 1999 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1999 ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಎಸ್ಎಂ. ಕೃಷ್ಣ ಮುನ್ನೆಡೆಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 132 ಸೀಟುಗಳನ್ನು ಗೆದ್ದು ಅಧಿಕಾರದ ಗದ್ದುಗೆಗೇರಿತು.

ವಿಧಾನಸಭೆ, ಪತ್ರಿಕಾಗೋಷ್ಠಿ ಅಥವಾ ಸಾರ್ವಜನಿಕ ಸಭೆಗಳಲ್ಲಿ, ಪ್ರತಿಕ್ರಿಯೆ ನೀಡುವಲ್ಲಿ ತಾವು ಮಾತನಾಡುತ್ತಿದ್ದ ಪದಗಳ ಮೇಲೆ ಕೃಷ್ಣ ಅವರು ಬಹಳ ಜಾಗರೂಕರಾಗಿರುತ್ತಿದ್ದರು. ತಮ್ಮ ಶಾಂತ ಸ್ವಭಾವದಿಂದಲೇ ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದ್ದರು. ಆದರೆ, 2011 ರಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಸಭೆಯಲ್ಲಿ ಆಗಿನ ವಿದೇಶಾಂಗ ವ್ಯವಹಾರ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರಿಂದ ಸಣ್ಣ ಕಣ್ತಪ್ಪಾಗಿತ್ತು.

ಪೋರ್ಚುಗಲ್ ವಿದೇಶಾಂಗ ಸಚಿವರ ಭಾಷಣದ ಸ್ವಲ್ಪ ಭಾಗ ಓದಿ ಬಿಟ್ಟಿದ್ದರು. ಭದ್ರತೆ ಮತ್ತು ಅಭಿವೃದ್ಧಿ ವಿಚಾರದ ಮೇಲೆ ನಡೆದ ಚರ್ಚೆಯ ಸಂದರ್ಭದಲ್ಲಿ ಕೃಷ್ಣ ಅವರು ಮೂರು ನಿಮಿಷಗಳ ಕಾಲ ಪೋರ್ಚುಗೀಸ್ ವಿದೇಶಾಂಗ ಸಚಿವ ಲೂಯಿಸ್ ಅಮಾಡೊ ಅವರ ಭಾಷಣ ಓದಿದ್ದರು. ತಕ್ಷಣ ತಪ್ಪನ್ನು ಅರಿತುಕೊಂಡ ವಿಶ್ವಸಂಸ್ಥೆಯಲ್ಲಿಗ್ಗ ಅಂದಿನ ಭಾರತದ ಪ್ರತಿನಿಧಿ ಹರ್ದೀಪ್ ಸಿಂಗ್ ಪುರಿ ಅವರು ತಪ್ಪನ್ನು ಸಚಿವರ ಗಮನಕ್ಕೆ ತಂದು ಆಗಬಹುದಾಗಿದ್ದ ಮತ್ತಷ್ಟು ದೊಡ್ಡ ಪ್ರಮಾದವನ್ನು ತಪ್ಪಿಸಿದ್ದರು.

ಇನ್ನು ರಾಜ್ಯದಲ್ಲಿ ಎಸ್ಎಂ ಕೃಷ್ಣ ಆಳ್ವಿಕೆ ಇಡೀ ದೇಶದಲ್ಲೇ ಸಾಕಷ್ಟು ಸದ್ದು ಮಾಡಿತ್ತು. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ ಎನ್ನುವ ಎಸ್.ಎಂ ಕೃಷ್ಣ ಹೇಳಿಕೆ ಇಡೀ ದೇಶವೇ ರಾಜ್ಯದ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಆದರೆ, ಬೆಂಗಳೂರು ಸಿಂಗಾಪರ ಆಗದಿದ್ದರೂ ಐಟಿ ಸಿಟಿಯಾಗಿ ಹೊರಹೊಮ್ಮಿದೆ. ಇದರ ಜೊತೆಗೆ ವಿಧಾನಸೌಧದ ಪಕ್ಕದಲ್ಲಿ ವಿಧಾನಸೌಧದ ಪ್ರತಿಕೃತಿಯಂತೆ ವಿಕಾಸಸೌಧ ನಿರ್ಮಿಸಿದರು. ವಿಕಾಸಸೌಧದ ನಿರ್ಮಾತೃ ಎನ್ನುವ ಹೆಗ್ಗಳಿಕೆಯೂ ಇವರಿಗೆ ಸಲ್ಲಿತ್ತದೆ.

1999ರ ಹೊತ್ತಿಗಾಗಲೇ ಬೆಂಗಳೂರಿಗೆ ಐಟಿ ಕಂಪನಿಗಳು ಕಾಲಿಡಲಾರಂಭಿಸಿದ್ದವು. ಅದೇ ವರ್ಷ ಕೃಷ್ಣ ಅವರ ನೇತೃತ್ವದ ಸರಕಾರ ಆಡಳಿತ ಆರಂಭಿಸಿತ್ತು. 1999ರಿಂದ 2004ರ ಕೃಷ್ಣ ಆಡಳಿತದ ಅವಧಿ, ಇಲ್ಲಿ ಪ್ರಮುಖ ಐಟಿ ಕಂಪನಿಗಳ ಆಗಮನದ ಕಾಲವಾಗಿತ್ತು. ಈ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಶಾಖೆ ತೆರೆಯುವಂತೆ ಪ್ರೇರೇಪಿಸಲು ಅಗತ್ಯವಾದ ಕೆಲಸಗಳನ್ನು ಕೃಷ್ಣ ಮಾಡಿದರು.

ಇವುಗಳಿಗೆ ರಿಯಾಯತಿ ದರದಲ್ಲಿ ಭೂಮಿ ಒದಗಿಸುವುದು, ನೀರು ಹಾಗೂ ವಿದ್ಯುತ್‌ ನೀಡುವಿಕೆಯನ್ನು ಖಾತ್ರಿಪಡಿಸಿದರು. ರಸ್ತೆಗಳು ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರು. ಕಂಪನಿಗಳ ಸ್ಥಾಪನೆಗೆ ಅಗತ್ಯವಾದ ಸರ್ಕಾರಿ ಕಡತ ಫೈಲಿಂಗ್‌ ವ್ಯವಸ್ಥೆಯನ್ನು ಸರಳಗೊಳಿಸಿದರು. ಕಡತಗಳ ಹಾಗೂ ಲೆಕ್ಕಪತ್ರ ಗಣಕೀಕರಣಕ್ಕೆ ಮುಂದಾದರು. ತೆರಿಗೆ ವ್ಯವಸ್ಥೆ ಸುಗಮಗೊಳಿಸಿ ಪರವಾನಗಿ ನೀಡುವಿಕೆಗೆ ಸಿಂಗಲ್‌ ವಿಂಡೋ ಪರಿಚಯಿಸಿದರು.

ಇದೆಲ್ಲದಕ್ಕಾಗಿ ಬೆಂಗಳೂರು ಟಾಸ್ಕ್‌ ಫೋರ್ಸ್‌ ಸ್ಥಾಪಿಸಿದರು. ಹೂಡಿಕೆ ಪ್ರಚೋದನೆ ಮತ್ತು ಆಡಳಿತಾತ್ಮಕ ಕಾರ್ಯಗಳಿಗಾಗಿ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸಿದರು. ಕಾರ್ಮಿಕ ನೀತಿಗಳನ್ನು ವಿಶೇಷವಾಗಿ ಸಡಿಲಿಸಿದರು. ಕಾರ್ಮಿಕರು ಹಗಲಿರುಳು ದುಡಿಯಬಹುದು, ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬಹುದು ಎಂಬ ಅನುಕೂಲಗಳು ಐಟಿ ವಲಯದ ಬೆಳವಣಿಗೆಗೆ ಅನುಕೂಲವಾಯಿತು. ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶದಲ್ಲಿ ಆಡಳಿತದಲ್ಲಿದ್ದ ಚಂದ್ರಬಾಬು ನಾಯ್ಡು ಕೂಡ ಇವರಿಗೆ ಪೈಪೋಟಿ ನೀಡಲು ಯತ್ನಿಸಿದರು.

ನಂತರ ಇನ್ಫೋಸಿಸ್, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಮೊದಲಾದ ಕಂಪನಿಗಳು ಇದರ ಲಾಭ ಪಡೆದು ಬೆಂಗಳೂರಿನಲ್ಲಿ ಗಟ್ಟಿಯಾಗಿ ನೆಲೆ ನಿಂತವು. ಪಕ್ಕದ ರಾಜ್ಯಗಳಿಂದ ಇಲ್ಲಿಗೆ ಲಕ್ಷಗಟ್ಟಲೆ ಉದ್ಯೋಗಿಗಳು ಬಂದು ದುಡಿಯ ತೊಡಗಿದರು. ಅಮೆರಿಕದ ಕಂಪನಿಗಳೂ ಇಲ್ಲಿಗೆ ತಮ್ಮ ಕೆಲಸಗಳನ್ನು ಔಟ್‌ಸೋರ್ಸಿಂಗ್‌ ಕೊಡ ತೊಡಗಿದವು. ಐಟಿ ಹೊರಗುತ್ತಿಗೆ ಸೇವೆ ಒದಗಿಸುವ ಅತಿ ದೊಡ್ಡ ಹಬ್‌ ಆಯಿತು. ದೇಶದ ಮಾಹಿತಿ ತಂತ್ರಜ್ಞಾನದ ಕೇಂದ್ರವಾಯಿತು. ರಿಯಲ್‌ ಎಸ್ಟೇಟ್‌ ಉದ್ಯಮದ ಬೆಳವಣಿಗೆಯಾಗಿ ನಗರ ಅನಿಯಂತ್ರಿತವಾಗಿ ಬೆಳೆಯಲು ಕೂಡ ಕಾರಣವಾಯಿತು.

ಈ ಜನಪ್ರಿಯತೆಯ ಧೈರ್ಯದಿಂದಲೇ 2004ರಲ್ಲಿ ಅವಧಿಗೂ ಮುನ್ನ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ತೆರಳಲು ಕೃಷ್ಣ ನಿರ್ಧರಿಸಿದರು. ಆದರೆ, ಅವರ ಈ ನಿರ್ಧಾರ ಕೈಹಿಡಿಯಲಿಲ್ಲ. ಚಾಮರಾಜಪೇಟೆಯಿಂದ ಕೃಷ್ಣ ಗೆದ್ದರೂ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಪಟ್ಟಿತು. ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ರಾಜ್ಯದಲ್ಲಿ ಮೊದಲ ಬಾರಿಗೆ ಮೈತ್ರಿ ಸರ್ಕಾರ ರಚನೆಯಾಯಿತು. ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಪ್ರಯತ್ನ ಸಫಲವಾಗಲಿಲ್ಲ. ಹಾಗಾಗಿ ಮೈತ್ರಿ ಸರ್ಕಾರದಿಂದ ಹೊರಗುಳಿದ ಕೃಷ್ಣ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ನೇಮಿಸಿತು.

2004-2008 ರವರೆಗೆ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಕೃಷ್ಣರನ್ನು ಮನಮೋಹನ್ ಸಿಂಗ್ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರನ್ನಾಗಿ ಮಾಡಿ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. 2009- 2012ರ ವರೆಗೆ ವಿದೇಶಾಂಗ ಸಚಿವರಾಗಿ ಕೃಷ್ಣ ಕಾರ್ಯ ನಿರ್ವಹಣೆ ಮಾಡಿದ್ದರು. ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಏಕಾಏಕಿ ಸಂಪುಟದಿಂದ ಕೃಷ್ಣ ಅವರನ್ನು ಕೈಬಿಡಲಾಗಿತ್ತು. ನಂತರ ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಂಡಿದ್ದ ಕೃಷ್ಣ, 2017ರ ಜನವರಿ 28 ಬೆಳಗ್ಗೆ 11 ಗಂಟೆಗೆ ಅಧಿಕೃತವಾಗಿ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಣೆ ಮಾಡಿ, ಬಿಜೆಪಿ ಸೇರಿದ್ದರು. ಯಾವುದೇ ಹುದ್ದೆಯ ನಿರೀಕ್ಷೆ ಇಲ್ಲದೆ ಬಿಜೆಪಿಯಲ್ಲಿದ್ದು, ಮಾರ್ಗದರ್ಶನ ಮಾಡುವುದಕ್ಕೆ ಸೀಮಿತರಾಗಿದ್ದರು.

ಎಸ್.ಎಂ.ಕೃಷ್ಣ ರಾಜಕೀಯ ಜೀವನ

  • ಎಸ್​ ಎಂ ಕೃಷ್ಣ ಅವರು ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಸ್ವಲ್ಪ ಕಾಲ ಅಂತಾರಾಷ್ಟ್ರೀಯ ನ್ಯಾಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.

  • ಮೊದಲ ಬಾರಿಗೆ 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದರು. 1968ರಲ್ಲಿ ಲೋಕಸಭೆಗೆ ಚುನಾಯಿತರಾದರು. 1971ರಲ್ಲಿ ಮರು ಚುನಾಯಿತರಾಗಿ ಮತ್ತೆ 1972ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾಯಿತರಾದರು.

  • ಇದೇ ಸಮಯದಲ್ಲಿ ಎಸ್ ಎಂ ಕೃಷ್ಣ ಅವರು ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. 1983ರಲ್ಲಿ ಉದ್ಯಮ ಖಾತೆ ಮತ್ತು 1984ರಲ್ಲಿ ವಿತ್ತ ಖಾತೆಯ ಸಚಿವರಾದರು. 1989ರಿಂದ 1992ರವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಿತರಾದರು. ಅಲ್ಲದೆ 1992 ರಿಂದ 1994 ರವರೆಗೆ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸೇವೆ ಸಲ್ಲಿಸಿದರು.

  • 1995ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಸ್ಎಂಕೃಷ್ಣ ಸೋಲು ಅನುಭವಿಸಬೇಕಾಯಿತು. ಆ ವೇಳೆ ರಾಜಕೀಯದಲ್ಲಿ ಕೃಷ್ಣ ಅವರ ಸೋಲು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

  • ಬಳಿಕ 1989 ರಿಂದ 1993 ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. 1996ರಲ್ಲಿ ರಾಜ್ಯಸಭೆಗೆ ನೇಮಕಗೊಂಡ ಎಸ್ ಎಂ ಕೃಷ್ಣ ಅವರು, 1999ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಅಲ್ಲದೆ 1999 ರಿಂದಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದರು.

  • 1999 ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಎಸ್ಎಂ ಕೃಷ್ಣ ಮುನ್ನೆಡೆಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 132 ಸೀಟುಗಳನ್ನು ಗೆದ್ದು ಅಧಿಕಾರದ ಗದ್ದುಗೆ ಹಿಡಿಯಿತು.1999 ರಿಂದ 2004 ರವರೆಗೆ ಎಸ್.ಎಂ.ಕೃಷ್ಣ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು.

  • ಎಸ್ ಎಂ ಕೃಷ್ಣ ಅವರು 2004 ರಿಂದ 2008 ರವರೆಗೆ ಮಹಾರಾಷ್ಟ್ರದ 19ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. 2009- 2012ರ ವರೆಗೆ ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದ ಕೃಷ್ಣ ಅವರು ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ 2017ರ ಮಾರ್ಚ್​ನಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯತ್ವವನ್ನು ಪಡೆದಿದ್ದರು.

  • ಎಸ್.ಎಂ.ಕೃಷ್ಣ ಅವರು ವಿದೇಶಗಳಲ್ಲಿ ಎರಡು ಬಾರಿ (ವಿಶ್ವಸಂಸ್ಥೆಯಲ್ಲಿ ಒಮ್ಮೆ, ಮತ್ತು ಕಾಮನ್ ವೆಲ್ತ್ ಒಕ್ಕೂಟದಲ್ಲಿ ಒಮ್ಮೆ) ಭಾರತವನ್ನು ಪ್ರತಿನಿಧಿಸಿದ್ದಾರೆ.

  • ಒಟ್ಟಾರೆಯಾಗಿ ಎಸ್ ಎಂ ಕೃಷ್ಣ ಅವರು ಪ್ರಮುಖ 10 ಚುನಾವಣೆಗಳನ್ನು ಎದುರಿಸಿದ್ದಾರೆ. 6 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದು, ಇವುಗಳಲ್ಲಿ 4 ರಲ್ಲಿ ಗೆಲುವು, 2 ಚುನಾವಣೆಯಲ್ಲಿ ಸೋಲನ್ನು ಅಭವಿಸಿದ್ದಾರೆ.

  • 4 ಲೋಕಸಭಾ ಚುನಾವಣೆಗಳನ್ನು ಎದುರಿಸಿದ್ದು, ಈ ಪೈಕಿ 3 ಚುನಾವಣೆಯಲ್ಲಿ ಗೆಲುವು ಪಡೆದು, 1 ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಮದ್ದೂರು ಕ್ಷೇತ್ರದಿಂದ 3 ಬಾರಿ ಹಾಗೂ ಚಾಮರಾಜಪೇಟೆಯಿಂದ 1 ಬಾರಿ ಶಾಸಕರಾಗಿದ್ದಾರೆ.

-ರಾಮು ಪಾಟೀಲ್

(ಅಸಿಸ್ಟೆಂಟ್ ರೆಸಿಡೆಂಟ್ ಎಡಿಟರ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT