ಬೆಂಗಳೂರು: ಮಲಯಾಳಂನ ಖ್ಯಾತ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧದ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಕೇರಳದ ಸಂತ್ರಸ್ತೆ ದಾಖಲಿಸಿರುವ ಅಪರಾಧದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ರಂಜಿತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಡಿಸೆಂಬರ್ 9 ರಂದು ಮಧ್ಯಂತರ ತಡೆಯಾಜ್ಞೆ ನೀಡಿದರು.
ಆರಂಭದಲ್ಲಿ ಕೇರಳ ಪೊಲೀಸರ ಮುಂದೆ ದೂರು ದಾಖಲಾಗಿತ್ತು. ಇದನ್ನು ಬೆಂಗಳೂರಿನ ಬಿಐಎಎಲ್ ಪೊಲೀಸ್ ಠಾಣೆಗೆ ವರ್ಗಾಯಿಸಿ ಕಳೆದ ಅಕ್ಟೋಬರ್ 26ರಂದು ಸೆಕ್ಷನ್ 377 ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 66 ಇ ಅಡಿಯಲ್ಲಿ ನೋಂದಾಯಿಸಲಾಗಿತ್ತು.
ದೂರುದಾರೆ ಉದಯೋನ್ಮುಖ ನಟಿಯಾಗಿದ್ದು, 2012 ರಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಸ್ಟಾರ್ ಹೋಟೆಲ್‌ಗೆ ರಂಜಿತ್ ತನ್ನನ್ನು ಕರೆದು ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿದ್ದರು ಎಂದು ದೂರು ನೀಡಿದ್ದರು.
ಅರ್ಜಿದಾರರ ಪರ ವಕೀಲರ ದೂರು ಮತ್ತು ವಾದಗಳನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಮೇಲ್ನೋಟಕ್ಕೆ ದೂರು ಸುಳ್ಳು ಎಂದು ಕಂಡುಬರುತ್ತಿದೆ ಎಂದು ಹೇಳಿದರು. ದೂರುದಾರೆ ಉಲ್ಲೇಖಿಸಿರುವ ವಿಮಾನ ನಿಲ್ದಾಣದ ಬಳಿ ಹೇಳಲಾದ ಹೋಟೆಲ್ 2016 ರಲ್ಲಷ್ಟೇ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಸಾರ್ವಜನಿಕವಾಗಿ ಮಾಹಿತಿ ಲಭ್ಯವಿದೆ.
ಘಟನೆ ನಡೆದು ನಾಲ್ಕು ವರ್ಷಗಳ ನಂತರ ಹೊಟೇಲ್ ಆರಂಭವಾಗಿದೆ. ಆದ್ದರಿಂದ, ಹೋಟೆಲ್‌ನದ್ದು ಎಂದು ಹೇಳಲಾಗುವ ವಿವರಣೆಯು ಸಂಪೂರ್ಣವಾಗಿ ಸುಳ್ಳಾಗಿದೆ. 2024ರಲ್ಲಿ ದೂರು ದಾಖಲಾಗಿದ್ದು, 2012ರಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ದೂರುದಾರರು ದೂರು ದಾಖಲಿಸಿಕೊಳ್ಳಲು 12 ವರ್ಷ ತೆಗೆದುಕೊಂಡಿದ್ದಾರೆ. 12 ವರ್ಷಗಳ ಕಾಲ ವಿಳಂಬ ಮಾಡಿರುವುದಕ್ಕೆ ಸರಿಯಾದ ವಿವರಣೆಗಳಿಲ್ಲ ಎಂದು ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದರು.
ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ನ್ಯಾಯಾಧೀಶರು ರಾಜ್ಯ ಪೊಲೀಸರಿಗೆ ನೋಟಿಸ್ ಮತ್ತು ದೂರುದಾರರಿಗೆ ತುರ್ತು ನೋಟಿಸ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಜನವರಿ 17, 2025 ಕ್ಕೆ ಮುಂದೂಡಿದರು.