ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ನಟ ದರ್ಶನ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. 6 ತಿಂಗಳ ಬಳಿಕ ದರ್ಶನ್, ಪವಿತ್ರಾಗೌಡ ಸೇರಿದಂತೆ ಕೊಲೆ ಪ್ರಕರಣದ 7 ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದೆ. ದರ್ಶನ್ ಗೆ ಬೆನ್ನುನೋವು ಇದ್ದ ಕಾರಣ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಕೋರ್ಟ್ ಈ ಹಿಂದೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈಮಧ್ಯೆ, ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಕಾಶ್ ರಾಜ್, ದರ್ಶನ್ ಜಾಮೀನು ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ. ನಾನು ಇಲ್ಲಿಗೆ ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ನಾನು ಮಕ್ಕಳ ಬಗ್ಗೆ ಮಾತನಾಡುತ್ತೇನೆ ಹೊರತು ಕಳ್ಳ ನನ್ನ ಮಕ್ಕಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ‘ಅಸಂವಿಧಾನಿಕ’ ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಂಚಮಸಾಲಿ ಸಮುದಾಯದವರು ತಮ್ಮ ಸಮಸ್ಯೆಗಳ ಕುರಿತು ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ಸಂಪರ್ಕಿಸುವಂತೆ ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ವರದಿಯನ್ನು ಉಲ್ಲೇಖಿಸಿ, ಪ್ರಸ್ತುತ ಪ್ರವರ್ಗ 2ಎ ಮತ್ತು 2ಬಿ ರಚನೆಯು ಹಾಗೆಯೇ ಉಳಿಯಬೇಕು ಎಂದು ಹೇಳಿದರು. ಪ್ರವರ್ಗ 2ಬಿ ಅಡಿಯಲ್ಲಿ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಬಾರದು ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡು ಜನರಿಗೆ ತೊಂದರೆ ನೀಡಿದರೆ ಸರ್ಕಾರ ಕಣ್ಣುಮುಚ್ಚಿ ಕೂರುವುದಿಲ್ಲ, ಧರಣಿ ನಡೆಸುವುದರಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಪ್ರತಿಭಟನೆ ಶಾಂತಿಯುತವಾಗಿರಬೇಕು ಎಂದರು.
Biggboss ಖ್ಯಾತಿಯ ಡ್ರೋನ್ ಪ್ರತಾಪ್ ನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಸೋಡಿಯಂ ಹಾಗೂ ಇನ್ನಿತರ ರಾಸಾಯನಿಕಗಳನ್ನು ಬಳಸಿ ಕೃಷಿ ಹೊಂಡಾದಲ್ಲಿ ಡ್ರೋಣ್ ಪ್ರತಾಪ್ ಸ್ಫೋಟಿಸಿದ್ದರು. ಅಲ್ಲದೆ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ಸಂಬಂಧ ತುಮಕೂರು ಜಿಲ್ಲೆಯ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಸಂಬಂಧ ಮಿಡಿಗೇಶಿ ಪೊಲೀಸರು ಪ್ರತಾಪ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರತಾಪ್ ಪ ವಿಜ್ಞಾನ ಪ್ರಯೋಗವನ್ನು ಪರಿಸರವಾದಿಗಳು ಮತ್ತು ಸಾರ್ವಜನಿಕರು ತೀವ್ರವಾಗಿ ಟೀಕಿಸಿದರು. ಸಾಮಾಜಿಕ ಮಾಧ್ಯಮ ವೀಕ್ಷಣೆಗಳಿಗಾಗಿ ಅಪಾಯಕಾರಿ ಕೃತ್ಯಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ ದುಷ್ಕರ್ಮಿಗಳು ಇಂತಹ ಪ್ರದರ್ಶನಗಳ ಸಂಭಾವ್ಯ ದುರುಪಯೋಗ ಮಾಡಿಕೊಳ್ಳುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು.
ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರನ್ನು ಇಂದು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 4ರಂದು ಹೈದರಾಬಾದ್ ನ ಸಂಧ್ಯಾ ಚಿತ್ರಮಂದಿರದ ಬಳಿ ಪುಷ್ಪ-2 ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದ ವೇಳೆ 35 ವರ್ಷದ ಮಹಿಳೆ ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಅರ್ಜುನ್‌ನನ್ನು ಬಂಧಿಸಿದ್ದ ಪೊಲೀಸರು ವೈದ್ಯಕೀಯ ಪರೀಕ್ಷೆ ಬಳಿಕ ನಾಂಪಲ್ಲಿ ಕೋರ್ಟ್ ಮುಂದೆ ಹಾಜರುಪಡಿಸಿದ್ದು, ಕೋರ್ಟ್ ನಟನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮತ್ತೊಂದೆಡೆ ಅಲ್ಲು ಅರ್ಜುನ್ ಪರ ವಕೀಲರು ಹೈಕೋರ್ಟ್ ನಲ್ಲಿ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಸದ್ಯ ನಟನನ್ನು ಚಂಚಲಗೂಡ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಕಾರಾಗೃಹ ಪ್ರಕ್ರಿಯೆಗಳು ಮುಕ್ತಾಯಗೊಂಡ ಬಳಿಕ ನಾಳೆ ನಟ ಜೈಲಿನಿಂದ ಹೊರಬರುವ ಸಾಧ್ಯತೆ ಇದೆ.
ಸಿಂಗಾಪುರ್ ನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಭಾರತದ ಚೆಸ್ ಆಟಗಾರ ಡಿ ಗುಕೇಶ್ ವಿಶ್ವ ಚಾಂಪಿಯನ್ ಆಗಿದ್ದಾರೆ. ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ನಂತರ ಭಾರತದ ಎರಡನೇ ವಿಶ್ವ ಚೆಸ್ ಚಾಂಪಿಯನ್ ಆಗಿ ಗುಕೇಶ್ ಹೊರಹೊಮ್ಮಿದ್ದಾರೆ. ಅಲ್ಲದೆ 18 ವರ್ಷಕ್ಕೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಗುಕೇಶ್ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೆಸ್ ಚಾಂಪಿಯನ್ ಗುಕೇಶ್ ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು, ಸಾರ್ವಜನಿಕರು ಅಭಿನಂದನೆ ತಿಳಿಸಿದ್ದಾರೆ.