ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಸಂಬಂಧ ಮಾರತ್ತಹಳ್ಳಿ ಪೊಲೀಸರು 3 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅತುಲ್ ಪತ್ನಿ, ಮೊದಲ ಆರೋಪಿ ನಿಖಿತಾ ಸಿಂಘಾನಿಯ, ಎರಡನೇ ಆರೋಪಿಯಾಗಿರುವ ಅತ್ತೆ ನಿಶಾ ಸಿಂಘಾನಿಯಾ, ಮೂರನೇ ಆರೋಪಿಯಾಗಿರುವ ಪತ್ನಿಯ ಸಹೋದರ ಅನುರಾಗ್ನನ್ನು ಪೊಲೀಸರು ಬಂಧಿಸಿ ತಡರಾತ್ರಿ ಬೆಂಗಳೂರಿಗೆ ಕರೆತಂದಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಅತುಲ್ ಪತ್ನಿ ನಿಖಿತಾಳನ್ನು ಬಂಧಿಸಲಾಗಿದ್ದು, ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ನಿಶಾ ಹಾಗೂ ಅನುರಾಗ್ನನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮೂವರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಕ್ಫ್ ಆಸ್ತಿ ಕಬಳಿಕೆ ಕುರಿತ ತನಿಖಾ ವರದಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ ಎಂದು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ. ವಿಜಯೇಂದ್ರ 150 ಕೋಟಿ ರೂಪಾಯಿ ಆಮಿಷವೊಡ್ಡಿರುವ ಬಗ್ಗೆ ಅನ್ವರ್ ಮಾಣಿಪ್ಪಾಡಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಃ ಮಾಣಿಪ್ಪಾಡಿ ಪ್ರತಿಕ್ರಿಯೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಹೇಳಿರುವುದು 90 ಪ್ರತಿಶಕ ಸುಳ್ಳು. ಕಾಂಗ್ರೆಸ್ನವರೇ ಲಂಚದ ಆಮಿಷವೊಡಿದ್ದರು. ಬಿ.ವೈ.ವಿಜಯೇಂದ್ರ ನನಗೆ ಯಾವುದೇ ಲಂಚದ ಅಮಿಷವೊಡ್ಡಿಲ್ಲ. 2012-13ರಲ್ಲಿ ವಿಜಯೇಂದ್ರ ಯಾರು ಅಂತಾನೆ ನನಗೆ ಗೊತ್ತಿರಲಿಲ್ಲ. ವರದಿ ಜಾರಿ ಮಾಡುವ ಸಲುವಾಗಿ ಪ್ರಧಾನಮಂತ್ರಿಗೆ ಪತ್ರ ಬರೆದು ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದೆ. ವರದಿ ಅನುಸಾರ ಸಿಬಿಐಗೆ ಕೊಟ್ಟರೆ ಕಾಂಗ್ರೆಸ್ಸಿಗರ ಬುಡಕ್ಕೆ ಬರುತ್ತೆ ಎಂದು ಮಾಣಿಪ್ಪಾಡಿ ಹೇಳಿದ್ದಾರೆ.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬಿಜೆಪಿ ಎಜೆಂಟರಂತೆ ವರ್ತಿಸುತ್ತಿದ್ದಾರೆ. ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದರೆ ಕೈ ಕತ್ತರಿಸುತ್ತೇವೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಎಚ್ಚರಿಕೆ ನೀಡಿದ್ದಾರೆ. ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲೆಂದು ಬಿಜೆಪಿಯವರಿಂದ ಸುಪಾರಿ ತೆಗೆದುಕೊಂಡಿದ್ದವರಂತೆ ವರ್ತಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸ್ವಾಮೀಜಿಯನ್ನು ಎತ್ತಿ ಕಟ್ಟಿದ್ದಾರೆ’ ಎಂದು ಆರೋಪಿಸಿದ್ದಾರೆ. ಇದೇ ವೇಳೆ, 2ಎ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಸಂವಿಧಾನ ಬಾಹಿರ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚಮಸಾಲಿ ಲಿಂಗಾಯತರಿಗೆ ಅವಮಾನ ಮಾಡಿದ್ದಾರೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿನ ಬೆನ್ನಲ್ಲೇ ರಾಯಚೂರಿನಲ್ಲಿ ಬಾಣಂತಿಯೊಬ್ಬರು ಸಾವನ್ನಪ್ಪಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಗಾರಲದಿನ್ನಿ ಗ್ರಾಮದ ಈಶ್ವರಿ ಅವರನ್ನು ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಡಿಸೆಂಬರ್ 8ರಂದು ಈಶ್ವರಿ ಅವರಿಗೆ ಹೆರಿಗೆಯಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದ ಬಳಿಕ ರಕ್ತಸ್ರಾವ, ಜ್ವರದಿಂದ ಬಳಲಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಾಣಂತಿ ಈಶ್ವರಿ ಸಾವಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ ಒಟ್ಟು 10 ಮಂದಿ ಬಾಣಂತಿಯರು ಮೃತಪಟ್ಟಿದ್ದಾರೆ. ರಾಯಚೂರಿನಲ್ಲಿ 1 ತಿಂಗಳಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದು ನಾಲ್ವರಿಗೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಳಕೆಯಾಗಿದ್ದ IVದ್ರಾವಣವೇ ನೀಡಲಾಗಿತ್ತು.
ಯಕ್ಷಗಾನದ ಮೊದಲ ಮಹಿಳಾ ಭಾಗವತರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಲೀಲಾವತಿ ಬೈಪಾಡಿತ್ತಾಯ ಇಂದು ನಿಧನರಾದರು. ವೃತ್ತಿನಿರತ ಯಕ್ಷಗಾನ ತಂಡಗಳೊಂದಿಗೆ ತಿರುಗಾಟ ನಡೆಸಿ ಇತಿಹಾಸ ನಿರ್ಮಿಸಿದ ಲೀಲಾವತಿ ಬೈಪಾಡಿತ್ತಾಯ ಕರಾವಳಿಯಾದ್ಯಂತ ರಾತ್ರಿಯ ಪ್ರದರ್ಶನಗಳನ್ನು ಪ್ರದರ್ಶಿಸುವ ಯಕ್ಷಗಾನ 'ಮೇಳಗಳು'ಪ್ರವಾಸ ಮಾಡಿದ ಮೊದಲ ಮಹಿಳೆಯಾಗಿದ್ದಾರೆ. ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಬಪ್ಪನಾಡು, ಕುಂಬಳೆ, ತಲಕಳ ಮತ್ತು ಅಳದಂಗಡಿ ಸೇರಿದಂತೆ ಹಲವಾರು ಹೆಸರಾಂತ ತಂಡಗಳೊಂದಿಗೆ ಒಡನಾಟ ಹೊಂದಿದ್ದ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ 'ಭಾಗವತ'ವಾಗಿ ಪ್ರದರ್ಶನ ನೀಡಿದರು. ಜೊತೆಗೆ, ಅವರು 17 ವರ್ಷಗಳಿಗೂ ಹೆಚ್ಚು ಕಾಲ 'ಅತಿಥಿ ಭಾಗವತ'ರಾಗಿಯೂ ಕೊಡುಗೆ ನೀಡಿದ್ದಾರೆ. ಲೀಲಾವತಿ ಅವರಿಗೆ 2010ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2023 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಯಿತು.