ಬೆಂಗಳೂರು: ವಕ್ಫ್ ಆಸ್ತಿ ಕಬಳಿಕೆಗೆ ಬಗ್ಗೆ ಮೌನ ವಹಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು 150 ಕೋಟಿ ರೂ. ಆಮಿಷವೊಡ್ಡಿದ್ದರು ಎಂಬ ವಿಚಾರ ಸದನದಲ್ಲಿ ಸೋಮವಾರ ಪ್ರಸ್ತಾವ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್ ಅವರು, ಅಲ್ಪಸಂಖ್ಯಾಕರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಆರಂಭದಲ್ಲಿ ಯಾವ ರೀತಿ ಹೇಳಿಕೆ ನೀಡಿದ್ದರು ಎಂಬುದು ಕಣ್ಣೆದುರಿಗಿದೆ. ಆದರೀಗ ಮಾತು ತಿರುಚಿರುವುದು ಸ್ಪಷ್ಟವಾಗುತ್ತಿದೆ. ಬಿ.ವೈ. ವಿಜಯೇಂದ್ರ ನನಗೆ 150 ಕೋಟಿರೂ. ನೀಡಲು ಬಂದಿದ್ದರು ಎಂದು ಅನ್ವರ್ ಹೇಳಿರುವ ವೀಡಿಯೋಗಳಿವೆ. ಈಗ ಹೇಳಿಕೆ ಬದಲಾಯಿಸುತ್ತಿದ್ದಾರೆ. ಲಂಚದ ಆಮಿಷ ಅನ್ವರ್ ಮಾಣಿಪ್ಪಾಡಿ ಹೇಳಿದ್ದಕ್ಕೆ ಮಾತ್ರ ಗೊತ್ತಾಗಿದೆ. ಈಗ ಉಲ್ಟಾ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕೋವಿಡ್ ಸಂದರ್ಭದಲ್ಲಿ ಹಗರಣವಾಗಿರುವುದಂತೂ ನಿಜ. ಸಾವಿರಾರು ಕೋಟಿ ರೂ.ಗಳ ಲೂಟಿಯಾಗಿದೆ, ತನಿಖೆ ಮಾಡಿಸುತ್ತೇವೆ ಎಂದು ನಾವು ಭರವಸೆ ನೀಡಿದ್ದೆವು. ಅದರಂತೆ ನಡೆದುಕೊಳ್ಳುತ್ತೇವೆ. ಅವ್ಯವಹಾರವಾಗಿರುವುದರಿಂದ ನ್ಯಾಯಮೂರ್ತಿ ಮೈಕಲ್ ಡಿ’ಕುನ್ಹಾ ಸಮಿತಿಯು ಪ್ರತಿಯೊಂದನ್ನು ಬಹಳ ಆಳವಾಗಿ ಬಿಚ್ಚಿಟ್ಟಿದೆ. ಮಾಸ್ಕ್, ಪಿಪಿಇ ಕಿಟ್, ಔಷಧ ಖರೀದಿ ಸೇರಿದಂತೆ ಎಲ್ಲವನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡಿ ಹಗರಣವನ್ನು ಪತ್ತೆ ಹಚ್ಚಿದೆ. ಸಂಬಂಧಪಟ್ಟ ಇಲಾಖೆಯವರು ಎಫ್ಐಆರ್ ಹಾಕಿದ್ದಾರೆ. ತನಿಖೆ ಮಾಡಿ ಸರಕಾರ ಏನು ತೀರ್ಮಾನ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತದೆ. ಸಾವಿರಾರು ಕೋಟಿ ರೂ. ಹಗರಣವಾಗಿದೆ. ಅಧಿಕಾರಿಗಳ ಹೆಸರು ಆರಂಭದಲ್ಲಿದೆ. ತನಿಖೆಯಲ್ಲಿ ರಾಜಕಾರಣಿಗಳ ಹೆಸರು ಬಂದರೆ, ಖರೀದಿ ವ್ಯವಹಾರಕ್ಕೆ ಸೂಚನೆ ನೀಡಿದ್ದರೆ ಅಥವಾ ನೇರವಾಗಿ ಭಾಗಿಯಾಗಿದ್ದರೆ ಅವರ ವಿರುದ್ಧವೂ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಕುರಿತು ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತನ ಪತ್ನಿ, ಅತ್ತೆ ಮತ್ತು ಭಾಮೈದುನನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚುವರಿ ವಿಚಾರಣೆಗೆ ಕಸ್ಟಡಿಗೆ ಪಡೆದಿದ್ದಾರೆ. ಅತುಲ್ ಬರೆದಿದ್ದ ಡೆತ್ನೋಟ್ನ್ನೂ ಈಗಾಗಲೇ ಪೊಲೀಸರು ಪಡೆದುಕೊಂಡಿದ್ದಾರೆ. ಮಹಿಳೆಯರಿಗಿರುವ ಕಾನೂನು ದುರ್ಬಳಕೆ ಆಗಿದೆ ಎಂಬುದೂ ಸೇರಿದಂತೆ ಅನೇಕ ವಿಚಾರಗಳನ್ನು ಡೆತ್ನೋಟಲ್ಲಿ ಅತುಲ್ ಬರೆದಿದ್ದಾರೆ. ಕಾನೂನಿನಲ್ಲಿರುವ ಅಂಶಗಳು ಗಂಡಂದಿರಿಗೆ ತೊಂದರೆ ಆಗುತ್ತಿವೆ ಎಂಬುದು ಆರೋಪ. ಇದು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ. ಮಹಿಳೆಯರಿಗೆ ಕೊಟ್ಟಿರುವ ಹಕ್ಕು ದುರ್ಬಳಕೆ ಆಗುತ್ತಿದೆ ಎನ್ನುವ ಕೂಗು ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಭಾರತೀಯ ದಂಡ ಸಂಹಿತೆ (ಬಿಎನ್‌ಎಸ್) ರಾಜ್ಯ ಮಟ್ಟದಲ್ಲಿ ಮತ್ತು ಕೇಂದ್ರದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಬೇಕು ಎಂದು ಹೇಳಿದರು.