ಬೆಂಗಳೂರು: ನಗರದ ಕ್ವೀನ್ಸ್ ಸರ್ಕಲ್‌ನಲ್ಲಿ 1906ರಲ್ಲಿ ಸ್ಥಾಪಿತವಾಗಿದ್ದ ರಾಣಿ ವಿಕ್ಟೋರಿಯಾ ಪ್ರತಿಮೆಯ ಕಿರೀಟಕ್ಕೆ ಹಾನಿಯಾಗಿದ್ದು, ಈ ಸಂಬಂಧ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಹೆರಿಟೇಜ್ ಬೇಕು ಗುಂಪು, ಪ್ರತಿಮೆಯ ಕಿರೀಟ ನಾಪತ್ತೆಯಾಗಿರುವುದು ಪತ್ತೆಯಾಗಿದ್ದು, ಇದು ಆಘಾತ ತಂದಿದೆ. ಈ ಸಂಬಂಧ ಬಿಬಿಎಂಪಿ ಆಯುಕ್ತರು, ಕಬ್ಬನ್ ಪಾರ್ಕ್ ಎಎಸ್ಐ ಸೇರಿದಂತೆ ಇತರೆ ಸಂಬಂಧ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಉದ್ದೇಶ ಪೂರ್ವಕವಾಗಿ ನಡೆದಿರುವ ಕೃತ್ಯವೆಂದು ಎನಿಸುತ್ತಿಲ್ಲ. ಕಿರೀಟ ಪುನಃ ಸ್ಥಾಪಿಸುವ ವಿಶ್ವಾಸವಿದೆ ಎಂದು ಹೇಳಿದೆ.
ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ ಉಮೇಶ್ ಮಾತನಾಡಿ, 1906 ರಿಂದಲೂ ಇಲ್ಲಿ ರಾಣಿ ವಿಕ್ಟೋರಿಯಾ ಅವರ ಪ್ರತಿಮೆ ಇದೆ. ಇದು ವಿಶ್ವದ ಕೆಲವು ಸ್ಮಾರಕಗಳಲ್ಲಿ ಒಂದಾಗಿದೆ. ಇದು ನಮ್ಮ ಪರಂಪರೆಯ ಗೌರವಾನ್ವಿತ ಭಾಗವಾಗಿದೆ. ಕಿರೀಟವು ಆಕಸ್ಮಿಕವಾಗಿ ಬೀಳಲು ಸಾಧ್ಯವಿಲ್ಲ. ಈ ಐತಿಹಾಸಿಕ ಸ್ಮಾರಕವನ್ನು ನಾಶಪಡಿಸಲು ಕೆಲವರು ಯತ್ನ ನಡೆಸಿದ್ದಾರೆಂಬುದು ನೋಡಿದರೆ ಸ್ಪಷ್ಟವಾಗುತ್ತಿದೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಹೆರಿಟೇಜ್ ಬೇಕು ಗುಂಪಿನ ಸದಸ್ಯೆ ಪ್ರಿಯಾ ಚೆಟ್ಟಿ ರಾಜಗೋಪಾಲ್ ಅವರು ಮಾತನಾಡಿ, ಕಿರೀಟವನ್ನು ಉದ್ದೇಶ ಪೂರ್ವಕವಾಗಿಯೇ ತೆಗೆದಿರುವುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ. ಕಿರೀಟ ಮೂರು ಭಾಗಗಳಾಗಿ ಒಡೆದು ಹೋಗಿದ್ದು, ತೋಟಗಾರಿಕಾ ಇಲಾಖೆ ಅವುಗಳನ್ನು ವಶಕ್ಕೆ ಪಡೆದಿದೆ. ಅಧಿಕಾರಿಗಳು ಶೀಘ್ರ ಕಾರ್ಯಪ್ರವೃತ್ತರಾಗಿದ್ದಾರೆ. ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಕುಸುಮಾ ಮತ್ತು ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರು ಹಾನಿಗೊಳಗಾದ ಕಿರೀಟವನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆಂದು ತಿಳಿಸಿದ್ದಾರೆ.
ತನಿಖೆ ನಡೆಸಲಾಗಿದೆ. ಕಿಡಿಗೇಡಿಗಳ ಕೃತ್ಯವಲ್ಲ ಎಂಬುದು ತಿಳಿದುಬಂದಿದೆ. ಆಕಸ್ಮಿಕವಾಗಿಯೇ ಕಿರೀಟ ಬಿದ್ದಿದೆ. ಹಾರ ಹಾಕಲು ಯತ್ನಿಸಿದಾಗ ಕಿರೀಟ ಬಿದ್ದಿರಬಹುದು ಎಂದು ಡಿಸಿಪಿ (ಕೇಂದ್ರ) ಶೇಖರ್ ಎಚ್ ತೆಕ್ಕಣ್ಣವರ್ ಅವರು ಹೇಳಿದ್ದಾರೆ. ಆದರೆ, ತಜ್ಞರು ಅಧಿಕಾರಿಗಳ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡು ವಾರಗಳ ಹಿಂದೆ ಗಿರಿನಗರದಲ್ಲಿ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಪ್ರತಿಮೆ ಧ್ವಂಸ ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.