ಮೈಸೂರು: ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ವಿರುದ್ಧ ಕೇಳಿಬಂದಿರುವ ಮುಡಾ ನಿವೇಶನಗಳ ಹಂಚಿಕೆ ಪ್ರಕರಣವನ್ನು ಹಿಂಪಡೆಯಲು ತನಗೆ ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದು, ಈ ಸಂಬಂಧ ಲೋಕಾಯುಕ್ತರಿಗೆ ದೂರು ದಾಖಲಿಸಿದ್ದಾರೆ.
ಹೌದು.. 'ಮುಡಾ ನಿವೇಶನಗಳ ಹಂಚಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ನ್ಯಾಯಾಲಯದಲ್ಲಿ ನಾನು ಸಲ್ಲಿಸಿರುವ ಅರ್ಜಿ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರ ಕಡೆಯವರು ಎಂದು ಹೇಳಿಕೊಂಡು ಕೆಲವರು ನನಗೆ ಹಾಗೂ ನನ್ನ ಕುಟುಂಬಕ್ಕೆ ಹಣದ ಆಮಿಷ ಒಡ್ಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದು, ಈ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಮೈಸೂರಿನ ಲೋಕಾಯುಕ್ತ ಎಸ್.ಪಿ. ಕಚೇರಿಗೆ ದೂರು ಸಲ್ಲಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, 'ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಕಡೆಯವರು ಎಂದು ಹೇಳಿಕೊಂಡ ಕೆಲವರು ಡಿ. 12ರಂದು ನನ್ನ ಮನೆಗೆ ಬಂದಿದ್ದರು. ಪಾರ್ವತಿ ಅವರ ಕೆಲಸಗಳನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ಅವರು ಈ ಪ್ರಕರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಹೀಗಾಗಿ ಸಿಬಿಐ ತನಿಖೆಗೆ ಕೋರಿರುವ ಪ್ರಕರಣವನ್ನು ಹಿಂಪಡೆಯಿರಿ. ಬೇಕಿದ್ದರೆ ಲೋಕಾಯುಕ್ತ ತನಿಖೆ ಮುಂದುವರಿಯಲಿ ಎಂದು ಹೇಳಿದ್ದರು. ಆದರೆ ಇದಕ್ಕೆ ನಾನು ಒಪ್ಪಿರಲಿಲ್ಲ' ಎಂದು ಹೇಳಿದ್ದಾರೆ.
ಅಂತೆಯೇ ಇದಾದ ಮಾರನೇ ದಿನವೇ ಕೆ.ಆರ್. ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಾಯಿತು. ನಾನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಕೀಲರನ್ನು ಕಾಣಲು ಬೆಂಗಳೂರಿಗೆ ತೆರಳಿದೆ. ಡಿ. 15ರಂದು ಮತ್ತೆ ನನ್ನ ಮನೆಗೆ ಬಂದ ಶ್ರೀನಿಧಿ ಮತ್ತು ಹರ್ಷ ಎಂಬ ಇಬ್ಬರು ನನ್ನ ಮಗನ ಜೊತೆ ಮಾತನಾಡಿದ್ದು, ಪ್ರಕರಣ ಹಿಂಪಡೆಯಲು ಇದೇ ರೀತಿ ವ್ಯಕ್ಯಿಯೊಬ್ಬರಿಗೆ ಮೂರು ಕೋಟಿ ಕೊಟ್ಟಿದ್ದೇವೆ ಎಂದು ಹಣದ ಬ್ಯಾಗ್ ಇರುವ ವಿಡಿಯೊ ತೋರಿಸಿದ್ದಾರೆ. ನಿಮ್ಮ ತಂದೆ ನ್ಯಾಯಾಲಯದಲ್ಲಿ ಪ್ರಕರಣ ಹಿಂಪಡೆಯಲು ಒಪ್ಪಿದರೆ ಇದೇ ರೀತಿ ಹಣ ಕೊಡುವುದಾಗಿಯೂ ಆಮಿಷ ಒಡ್ಡುತ್ತಾರೆ. ನನ್ನ ಮಗ ಒಪ್ಪದಿದ್ದಾಗ ಅವನಿಂದ ನನ್ನ ಮೊಬೈಲ್ ಸಂಖ್ಯೆ ಪಡೆದು ಹಲವು ಬಾರಿ ಕರೆ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ದೂರು ದಾಖಲು
ಇನ್ನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ತಾವು, 'ಈ ಸಂಬಂಧ ಮಂಗಳವಾರ ಬೆಂಗಳೂರಿನಲ್ಲಿ ಇ.ಡಿ. ಕಚೇರಿಗೆ ದೂರು ನೀಡಿದ್ದೇನೆ. ಇಂದು ಲೋಕಾಯುಕ್ತ ಎಸ್.ಪಿ. ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತಿದ್ದೇನೆ. ಆರೋಪಿಗಳು ನನ್ನ ಮನೆಗೆ ಬಂದ, ನನ್ನ ಮಗನ ಜೊತೆ ಮಾತನಾಡುತ್ತಿರುವ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅವುಗಳನ್ನು ಸಾಕ್ಷ್ಯವನ್ನಾಗಿ ನೀಡಿದ್ದೇನೆ. ಮೊದಲು ನನಗೆ ಹಣದ ಆಮಿಷ ಒಡ್ಡಿದರು. ಅದಕ್ಕೆ ನಾನು ಒಪ್ಪದೇ ಇದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳ ಮೂಲಕ ಸುಳ್ಳು ಪ್ರಕರಣ ದಾಖಲಿಸಿ ನನ್ನ ಮೇಲೆ ಒತ್ತಡ ಹೇರುವ ತಂತ್ರ ಮಾಡುತ್ತಿದ್ದಾರೆ' ಎಂದು ಕೃಷ್ಣ ಆರೋಪಿಸಿದ್ದಾರೆ.
ಅಂದಹಾಗೆ ಇಡೀ ರಾಜ್ಯದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಈ ಮುಡಾ ಹಗರಣದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ತಮ್ಮ ಪತ್ನಿ ಪಾರ್ವತಿ ಅವರಿಂದ 'ಸ್ವಾಧೀನಪಡಿಸಿಕೊಂಡ' ಭೂಮಿಗೆ ಪ್ರತಿಯಾಗಿ 14 ನಿವೇಶನಗಳನ್ನು ಮಂಜೂರು ಮಾಡುವಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಸಿದ್ದರಾಮಯ್ಯ ಅವರ ಮೇಲಿದೆ.
ಈ ಪ್ರಕರಣದಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಪ್ರಕರಣವನ್ನು ಲೋಕಾಯುಕ್ತ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ನಿರ್ದೇಶನಗಳನ್ನು ಕೋರಿದ್ದರು. ಸೆಪ್ಟೆಂಬರ್ 30 ರಂದು, ಲೋಕಾಯುಕ್ತ ಎಫ್‌ಐಆರ್ ಅನ್ನು ಗಮನದಲ್ಲಿಟ್ಟುಕೊಂಡು ಸಿಎಂ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲು ಇಡಿ ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ಸಲ್ಲಿಸಿತು ಮತ್ತು ಪ್ರಕರಣದ ತನಿಖೆ ನಡೆಸುತ್ತಿದೆ.