ಬೆಳಗಾವಿ: ವಿಧಾನ ಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪರಿಷತ್ ಸದಸ್ಯ ಸಿಟಿ ರವಿ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಸುವರ್ಣಸೌಧದ ಮೊಗಸಾಲೆಯಲ್ಲಿ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನ ನಡೆದಿರುವ ಘಟನೆ ವರದಿಯಾಗಿದೆ.
ಹೌದು.. ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ತೀವ್ರ ಸ್ವರೂಪ ಪಡೆದು ಕೊಂಡಿದ್ದು, ಬೆಳಗಾವಿಯ ಸುವರ್ಣ ಸೌಧದ ಮೊಗಸಾಲೆಯಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ. ವಿಧಾನಪರಿಷತ್ನ ಕಾರಿಡಾರ್ನಲ್ಲಿ ಹೋಗುತ್ತಿರುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಗಲಿಗರು ಏಕಾಏಕಿ ಸಿಟಿ ರವಿಗೆ ಅಡ್ಡ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಮಾತ್ರವಲ್ಲದೇ ನೂರಾರು ಬೆಂಬಲಿಗರು ಘೋಷಣೆ ಕೂಗಿ ಸಿಟಿ ರವಿ ಮೇಲೆ ಮುಗಿಬಿದ್ದಿದ್ದು, ಹಲ್ಲೆಗೆ ಯತ್ನ ನಡೆದಿದೆ. ಕೂಡಲೇ ಮಾರ್ಷಲ್ಗಳು, ಕಾರಿಡಾರ್ ಗೇಟ್ ಬಂದ್ ಮಾಡಿದರು. ಹೀಗಾಗಿ ಸಿಟಿ ರವಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಮಧ್ಯಪ್ರವೇಶ
ಇನ್ನು ಬಿಜೆಪಿ ಸದಸ್ಯ ಸಿಟಿ ರವಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಒಂದಿಬ್ಬರು ಹಲ್ಲೆಗೂ ಯತ್ನಿಸಿದ ಪ್ರಸಂಗ ನಡೆಯಿತು. ಇದರಿಂದ ಹೆಬ್ಬಾಳ್ಕರ್ ಬೆಂಬಲಿಗರ ವಿರುದ್ಧ ಕೆಂಡಾಮಂಡಲರಾದ ಸಿ.ಟಿ ರವಿ ʻಬಾ.. ಬಾ.. ಹೊಡಿ ಬಾ.., ಅದೇನ್ ಮಾಡ್ತಾರೆ ಮಾಡ್ಲಿ ಬಿಡ್ರಿ ಎಂದಿದ್ದಾರೆ. ಇದರಿಂದ ದೊಡ್ಡ ಗಲಾಟೆ ಉಂಟಾಗಿದ್ದು, ಕೂಡಲೇ ಪೊಲೀಸರು ದೌಡಾಯಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರನ್ನು ಚದುರಿಸಿದರು. ಅಲ್ಲದೇ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಧರಣಿ ಕುಳಿತ ಸಿ.ಟಿ.ರವಿ
ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರ ನಡೆಯಿಂದ ಆಕ್ರೋಶಗೊಂಡಿರುವ ಸಿಟಿ ರವಿ, 'ನನ್ನ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಕೊಲೆ ಬೆದರಿಕೆ ಹಾಕಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕೆಂದು ಧರಣಿ ಕುಳಿತರು. ನಾನು ಇದಕ್ಕೆಲ್ಲ ಹೆದರಿಕೊಂಡು ರಾಜಕಾರಣ ಮಾಡುವವನಲ್ಲ. ನಾನು ಏಕಾಂಗಿಯಾಗಿಯೇ ಎಲ್ಲವನ್ನೂ ಎದುರಿಸುತ್ತೇನೆ. ನನ್ನ ಕೊಲೆ ಮಾಡುವುದಕ್ಕೆ ಸಂಚು ರೂಪಿಸಿಕೊಂಡು ಬಂದಿದ್ದಾರೆ. ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ ಸಿಟಿ ರವಿ, ನಾನು ಆ ರೀತಿ ಪದಬಳಕೆ ಮಾಡಿದ್ದನ್ನ ತೋರಿಸಿ ಎಂದು ಸವಾಲು ಹಾಕಿದರು.
ಸುವರ್ಣಸೌಧದಲ್ಲೇ ಇಂತಹ ಸ್ಥಿತಿ ಇದೆ ಎಂದರೆ ಅರ್ಥಮಾಡಿಕೊಳ್ಳಿ. ಶಾಸಕನಿಗೆ ರಕ್ಷಣೆ ಇಲ್ಲ ಅಂದರೆ, ಜನಸಾಮಾನ್ಯರ ಸ್ಥಿತಿ ಹೇಗಿದೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬಾಣಂತಿಯರ ಸಾವು, ವಕ್ಫ್ ವಿಚಾರ ಡೈವರ್ಟ್ ಮಾಡಲು ಯತ್ನ. ಸರ್ಕಾರದ ಕುಮ್ಮಕ್ಕಿನಿಂದಲೇ ನಮ್ಮ ಮೇಲೆ ದಾಳಿ ನಡೆದಿದೆ ಎಂದು ಕಿಡಿಕಾರಿದರು.