ಬೆಂಗಳೂರು: ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು, ನಮ್ಮ ಮೆಟ್ರೋ ಮಾರ್ಗವನ್ನು ಹೊಸಕೋಟೆ, ನೆಲಮಂಗಲ ಹಾಗೂ ಬಿಡದಿವರೆಗೆ ವಿಸ್ತರಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸಭೆಯ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಶರತ್ ಬಚ್ಛೇಗೌಡ ಅವರು ಹೊಸಕೋಟೆಗೆ ಮೆಟ್ರೋ ಮಾರ್ಗ ವಿಸ್ತರಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು. ಈ ವಿಚಾರವಾಗಿ ಶರತ್ ಅವರು ಬಹಳ ಹೋರಾಟ ಮಾಡುತ್ತಿದ್ದಾರೆ. ಬೆಂಗಳೂರು ಕೂಡ ವಿಪರೀತವಾಗಿ ಬೆಳೆಯುತ್ತಿದೆ. ಸಾಮಾನ್ಯ ರೈಲಿನಲ್ಲಿ ಕೋಲಾರದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ದಿನ ನಿತ್ಯ ಸಂಚರಿಸುತ್ತಾರೆ. ಐಟಿ ಕಾರಿಡಾರ್ ಬಹುತೇಕ ಹೊಸಕೋಟೆ ಮುಟ್ಟಿದೆ. ಹೀಗಾಗಿ ಮೆಟ್ರೋ ಅವಶ್ಯಕತೆ ಇದೆ ಎಂದು ತಿಳಿಸಿದರು.
ಮಾರ್ಗ ವಿಸ್ತರಣೆ ವಿಚಾರವನ್ನು ನಾನು ಈಗಾಗಲೇ ಯೋಜನೆಯಲ್ಲಿ ಸೇರಿಸಿ ವಿಸ್ತೃತ ಸಮೀಕ್ಷೆ ಮಾಡಿಸುತ್ತಿದ್ದೇನೆ. ನಮ್ಮ ಸರ್ಕಾರ ಹಾಗೂ ಮೆಟ್ರೋ ಸಂಸ್ಥೆ ಅವರ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿದೆ. ಹೊಸಕೋಟೆ ಜತೆಗೆ ಬಿಡದಿ, ನೆಲಮಂಗಲದವರೆಗೂ ಮೆಟ್ರೋ ಮಾರ್ಗ ವಿಸ್ತರಣೆ ಯೋಜನೆ ಸಿದ್ಧಡಿಸಲು ವರದಿ ರೂಪಿಸಲಾಗುತ್ತಿದೆ. ನಾವು ನಿಮ್ಮ ಮನವಿಯನ್ನು ಪರಿಗಣಿಸಿದ್ದೇವೆ" ಎಂದು ತಿಳಿಸಿದರು. ಬೆಂಗಳೂರಿನ ಹೊರ ವಲಯದಲ್ಲಿ ನಾಲ್ಕು ಕಡೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು. ಅದರ ಜತೆಗೆ ಬೆಂಗಳೂರಿನಲ್ಲಿರುವ ಘನತ್ಯಾಜ್ಯ ಮಾಫಿಯಾ ಮಟ್ಟ ಹಾಕಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ಬಿಜೆಪಿ ಸದಸ್ಯರಾದ ಕೇಶವ್ ಪ್ರಸಾದ್ ಅವರು ಘನತ್ಯಾಜ್ಯದ ಬಗ್ಗೆ ಕೇಳಿದ ಚುಕ್ಕೆ ಗುರುತಿನ 1275ನೇ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು ಉತ್ತರಿಸಿದರು.
“ಸದಸ್ಯರು ಬಹಳ ಗಂಭೀರವಾದ ಪ್ರಶ್ನೆ ಎತಿದ್ದಾರೆ. ಇದು ದೊಡ್ಡ ಮಾಫಿಯಾವಾಗಿದ್ದು, ಈ ಮಾಫಿಯಾವನ್ನು ಯಾವ ಸರ್ಕಾರದ ಕಾಲದಲ್ಲೂ ನಿಲ್ಲಿಸಲು ಆಗಿಲ್ಲ. ಹೀಗಾಗಿ ಎಲ್ಲರೂ ಸಹಕಾರ ನೀಡಬೇಕು. ಈವರೆಗೂ ನನ್ನಿಂದ ಬಗೆಹರಿಸಲು ಸಾಧ್ಯವಾಗಿಲ್ಲ. ಇದಕ್ಕಾಗಿ ಪ್ರತ್ಯೇಕ ನೀತಿ ತರಬೇಕಿದೆ. ಬೆಂಗಳೂರು ಶಾಸಕರು ಈ ವಿಚಾರವಾಗಿ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಹೊರ ವಲಯದಲ್ಲಿ ನಾಲ್ಕು ದಿಕ್ಕುಗಳಲ್ಲಿ ಘನತ್ಯಾಜ್ಯ ವಿಲೇವಾರಿ ಕೇಂದ್ರ ಸ್ಥಾಪಿಸಲು ಮುಂದಾಗಿದ್ದೇವೆ. ದೆಹಲಿ, ಹೈದರಾಬಾದ್, ಚೆನ್ನೈಗಳಲ್ಲಿ ಅಳವಡಿಸಿಕೊಂಡಿರುವ ಮಾದರಿ ಪರಿಶೀಲಿಸಿದ್ದೇನೆ. ಸುಮಾರು 15 ಕಡೆಗಳಲ್ಲಿ ತ್ಯಾಜದಿಂದ ಇಂಧನ ಉತ್ಪಾದನೆಗೆ ಅವಕಾಶ ನೀಡಿದ್ದೆವು. ಎಲ್ಲವೂ ವಿಫಲವಾಗಿದೆ. ಬಿಡದಿಯಲ್ಲಿ ಮಾತ್ರ ಇದನ್ನು ನಡೆಸುತ್ತಿದ್ದಾರೆ” ಎಂದು ತಿಳಿಸಿದರು.
“ಬೆಂಗಳೂರಿನಿಂದ 15 ಕಿ.ಮೀ ದೂರದಲ್ಲಿ ಹೊರವಲಯದಲ್ಲಿ ನಾಲ್ಕು ಕಡೆ 100 ಎಕರೆ ಜಮೀನು ಗುರುತಿಸಲಾಗಿದೆ. ಶೀಘ್ರವೇ ಟೆಂಡರ್ ಕರೆದು ಶಾಶ್ವತ ಪರಿಹಾರ ನೀಡಲು ಪ್ರಯತ್ನಿಸಲಾಗುತ್ತಿದೆ. ಇತ್ತೀಚೆಗೆ ಕಸದ ಟೆಂಡರ್ ವಿಚಾರದಲ್ಲಿ ನಿಮ್ಮ ಪಕ್ಷದ ಅದ್ಯಕ್ಷರೊಬ್ಬರು ನಾನು 15 ಸಾವಿರ ಕೋಟಿ ಲೂಟಿ ಮಾಡಿರುವುದಾಗಿ ಪತ್ರಿಕೆಗಳಲ್ಲಿ ವರದಿ ನೀಡಿ ಬ್ಲಾಕ್ ಮೇಲ್ ಮಾಡುವ ಪ್ರಯತ್ನ ಮಾಡಿದ್ದ. ಈ ಬೆದರಿಕೆಗೆ ಹೆದರುವ ಮಗ ನಾನಲ್ಲ. ನಮ್ಮ ಸರ್ಕಾರ ಕೂಡ ಇದಕ್ಕೆ ಜಗ್ಗುವುದಿಲ್ಲ. ಈ ವಿಚಾರದಲ್ಲಿ ಕೆಲವು ಗಂಭೀರ ವಿಚಾರಗಳಿವೆ. ಈ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಸಿಎನ್ ಜಿ ಅನಿಲ ಉತ್ಪಾದನೆಗೆ ಅವಕಾಶವಿದೆ. ಈ ವಿಚಾರವಾಗಿ ಬೆಂಗಳೂರಿನ ಬಿಜೆಪಿ ಶಾಸಕರು ಕೂಡ ಒಪ್ಪಿದ್ದಾರೆ. ಶೀಘ್ರದಲ್ಲೇ ಅಂತಿಮ ಪರಿಹಾರ ನೀಡಲಾಗುವುದು. ಮೂರು ನಾಲ್ಕು ದಿನಗಳಲ್ಲಿ ಈ ವಿಚಾರವಾಗಿ ಟೆಂಡರ್ ಕರೆಯಲಾಗುವುದು” ಎಂದು ತಿಳಿಸಿದರು. “ನಾವು ನಾಲ್ಕು ಭಾಗಗಳಲ್ಲಿನ ಕಸ ವಿಲೇವಾರಿ ಘಟಕಕ್ಕೆ ಸಧ್ಯದಲ್ಲೇ ಟೆಂಡರ್ ಕರೆಯಲಿದ್ದು, ಯಾರು ಬೇಕಾದರೂ ಭಾಗವಹಿಸಬಹುದು. ಇಲ್ಲಿ ಮಾಫಿಯಾ ನಡೆಸುತ್ತಿರುವವರು ಅವರವರೇ ಟೆಂಡರ್ ಕರೆಯುತ್ತಿದ್ದು, ಈ ವಿಚಾರ ನ್ಯಾಯಾಲಯದಲ್ಲಿದೆ. ಶೀಘ್ರವೇ ಈ ಪ್ರಕರಣದಲ್ಲಿ ತೀರ್ಪು ಪ್ರಕಟವಾಗಲಿದ್ದು, ತೀರ್ಪು ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವಾಗಿ ನಿಮ್ಮೆಲ್ಲರ ಸಲಹೆ ಸ್ವೀಕರಿಸಲು ನಾವು ಸಿದ್ಧ” ಎಂದು ತಿಳಿಸಿದರು.