ಬೆಂಗಳೂರು: ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇದ್ದು, ಡಿಜಿಟಲ್ ಅರೆಸ್ಟ್ ಮೂಲಕ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಬರೋಬ್ಬರಿ 11.8 ಕೋಟಿ ರೂ. ವಂಚಿಸಲಾಗಿದೆ.
ವಂಚನೆಗೊಳಗಾದ ಸುಭಾಷ್(ಹೆಸರು ಬದಲಾಯಿಸಲಾಗಿದೆ) ಅವರು ರಾಜಧಾನಿ ಬೆಂಗಳೂರಿನ ಹೆಬ್ಬಾಳ ಸಮೀಪದ ಜಿಕೆವಿಕೆ ಲೇಔಟ್ ನಿವಾಸಿಯಾಗಿದ್ದು, ನವೆಂಬರ್ 25 ರಿಂದ ಡಿಸೆಂಬರ್ 15ರ ನಡುವೆ ಹಣ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ತಾವು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರೆಂದು ಹೇಳಿಕೊಂಡು ಸೈಬರ್ ವಂಚಕರು ಸುಭಾಷ್ ಅವರಿಗೆ ಕರೆ ಮಾಡಿದ್ದಾರೆ. “ಮುಂಬೈನ ಕೊಲಾಬಾದಲ್ಲಿ ನಿಮ್ಮ ಮೇಲೆ ಪ್ರಕರಣವೊಂದು ದಾಖಲಾಗಿದೆ. ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಹಣ ವರ್ಗಾವಣೆಯಾಗಿದೆ. 6 ಕೋಟಿ ರೂ. ವಂಚನೆಯಾಗಿದೆ. ಈಗ ಕೇಸ್ ಸುಪ್ರೀಂಕೋರ್ಟ್ನಲ್ಲಿ ಇದೆ ಎಂದು ಹೆದರಿಸಿದ್ದಾರೆ.
ಬಳಿಕ, ವಂಚಕರು ವಿಡಿಯೋ ಕಾಲ್ ಮಾಡಿ ಒಂದು ತಿಂಗಳ ಕಾಲ ಸುಭಾಷ್ ಅವರನ್ನು ಡಿಜಿಟಲ್ ಅರೆಸ್ಟ್ (Digital Arrest) ಮಾಡಿದ್ದಾರೆ. ಒಂದು ತಿಂಗಳ ಕಾಲ ಮನೆಯಲ್ಲಿ ಇರದಂತೆ ಹೇಳಿದ್ದಾರೆ. ಹೀಗಾಗಿ ಅವರು ಯಲಹಂಕದ ಲಾಡ್ಜ್ವೊಂದರಲ್ಲಿ ಇದ್ದರು.
ಸುಭಾಷ್ ಅವರು ಕಳೆದ ಹಲವು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದರು. ಇದನ್ನೇ ಟಾರ್ಗೆಟ್ ಮಾಡಿದ ಸೈಬರ್ ವಂಚಕರು ಟೆಕ್ಕಿ ವಿನಯ್ ಕುಮಾರ್ ಅವರಿಂದ ಷೇರುಗಳನ್ನು ಮಾರಾಟ ಮಾಡಿಸಿದ್ದಾರೆ. ಬಳಿಕ ಹಂತ ಹಂತವಾಗಿ ಒಂದು ತಿಂಗಳ ಕಾಲ ಅವರಿಂದ 11 ಕೋಟಿ 83 ಲಕ್ಷ ರೂ. ಅನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಈ ಸಂಬಂಧ ಬೆಂಗಳೂರಿನ ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.