ಬೆಂಗಳೂರು: ಬೆಂಗಳೂರುನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಹಾರಾಟದ ಮಧ್ಯೆ ಅಸ್ವಸ್ಥಗೊಂಡಿದ್ದ 44 ವರ್ಷದ ಮಾಜಿ ಸೈನಿಕರೊಬ್ಬರಿಗೆ ಡಾಕ್ಟರ್ ಒಬ್ಬರು ವಿಮಾನದಲ್ಲಿಯೇ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ. ಭಾನುವಾರ ಬೆಳಗ್ಗೆ 5-45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನದಲ್ಲಿ (ಸಂಖ್ಯೆ 6ಇ 6021) ಈ ಘಟನೆ ನಡೆದಿದೆ.
ವಿಮಾನ ಟೇಕಾಫ್ ಆದ 45 ನಿಮಿಷಗಳಲ್ಲಿ ಪ್ರಯಾಣಿಕರೊಬ್ಬರಿಗೆ ನೆರವಾಗಲು ಯಾರಾದರೂ ವೈದ್ಯರು ಮುಂದೆ ಬರ್ತಿರಾ ಎಂದು ಕ್ಯಾಬಿನ್ ಸಿಬ್ಬಂದಿ ಘೋಷಣೆ ಮಾಡಿದ್ದು, ತಕ್ಷಣ ಅವರನ್ನು ಸಂಪರ್ಕಿಸಿದ ಚಂಡೀಗಢದ ಪಿಜಿಐಎಂಇಆರ್‌ನಲ್ಲಿ (ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ)ಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮೊಹಿಂದ್ರಾ ಪ್ರಯಾಣಿಕನಿಗೆ ಏನಾಗಿದೆ ಎಂಬುದನ್ನು ಅರಿತು ಚಿಕಿತ್ಸೆ ನೀಡಿದ್ದಾರೆ. ಕ್ಯಾಬಿನ್ ಸಿಬ್ಬಂದಿಗೆ ನೀರಿನಲ್ಲಿ ಸಕ್ಕರೆಯನ್ನು ಬೆರೆಸಿ ಹೇಳಿದ್ದಾರೆ. ಅದನ್ನು ಕುಡಿದ ಪ್ರಯಾಣಿಕ 15 ನಿಮಿಷಗಳಲ್ಲಿಯೇ ಸಹಜ ಸ್ಥಿತಿಗೆ ಮರಳಿದ್ದು, ಡಾಕ್ಟರ್ ಗೆ ಧನ್ಯವಾದ ತಿಳಿಸಿದ್ದಾರೆ.
ದೇಹದ ಎಡಭಾಗದಲ್ಲಿ ಸುಸ್ತಾಗುತ್ತಿದ್ದು, ತಲೆನೋವಿದೆ ಎಂದು ಪ್ರಯಾಣಿಕ ಹೇಳಿದರು. ಅವರು ಮಧುಮೇಹಿಯಾಗಿದ್ದು, ನಿರಂತರವಾಗಿ ಔಷಧ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದರು. ಹೈಪೊಗ್ಲಿಸಿಮಿಯಾ (ಕಡಿಮೆ ಸಕ್ಕರೆ) ಆಗಿರಬಹುದು ಎಂದು ಭಾವಿಸಿದೆ. ಇದು ಸ್ವಲ್ಪ ಕಾಲದವರೆಗೆ ಹಾಗೆಯೇ ಇದ್ದರೆ ಪ್ರಜ್ಞೆ ಕಳೆದುಕೊಂಡು ಕೋಮಾಗೆ ಜಾರುವ ಅಪಾಯವಿತ್ತು. ಪ್ರಯಾಣಿಕ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವವರೆಗೂ ಅವರ ಬಳಿಯಲ್ಲಿಯೇ ಕುಳಿತುಕೊಂಡಿದ್ದೆ ಎಂದು ಡಾ. ಮೊಹಿಂದ್ರಾ TNIE ಗೆ ತಿಳಿಸಿದರು.
ರೋಗಿಯು ಮೈಸೂರಿನವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಅವರ ಪತ್ನಿಯೂ ದೆಹಲಿಗೆ ತೆರಳುತ್ತಿದ್ದರು. ಅವರ ವೈದ್ಯರು ಬೇಗನೆ ಭೇಟಿ ಮಾಡಿ, ಔಷಧಿಗಳನ್ನು ಬದಲಾಯಿಸಲು ಸಲಹೆ ನೀಡಿದ್ದೇನೆ. ಒಬ್ಬ ವ್ಯಕ್ತಿಯು ನಿಯಮಿತವಾಗಿ ಆಂಟಿ-ಡಯಾಬಿಟಿಕ್ ಔಷಧಿಗಳು ಅಥವಾ ಇನ್ಸುಲಿನ್ ಅನ್ನು ಬಳಸುತ್ತಿದ್ದರೆ ಅಂತಹ ಸ್ಥಿತಿ ಬರಬಹುದು. ರೋಗಿಗಳಿಗೆ ಹೈಪೊಗ್ಲಿಸಿಮಿಯಾದ ಎಚ್ಚರಿಕೆಯ ಸಂಕೇತಗಳ ಬಗ್ಗೆ ಶಿಕ್ಷಣ ನೀಡಬೇಕು ಎಂದು ಅವರು ವಿವರಿಸಿದರು. ಆದರೆ,ಇಂಡಿಗೋ ಈ ಕುರಿತು ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ.