ಘಟನೆ ಬೆನ್ನಲ್ಲೇ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿರುವ ಮುನಿರತ್ನ. 
ರಾಜ್ಯ

ಮುನಿರತ್ನ ಮೇಲೆ ಮೊಟ್ಟೆ ದಾಳಿ: ಶಾಸಕ ಸ್ಥಾನದಿಂದ ಕೆಳಗಿಳಿಸಲು ಡಿಕೆ ಸಹೋದರರ ಷಡ್ಯಂತ್ರ; BJP ತೀವ್ರ ಖಂಡನೆ

ರಾಜರಾಜೇಶ್ವರಿ ನಗರ ಶಾಸಕರಾದ ಮುನಿರತ್ನ ಅವರ ಮೇಲೆ ಗೂಂಡಾಗಳು ಹಲ್ಲೆ ನಡೆಸಿರುವುದು ಖಂಡನೀಯ. ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿರುವುದಕ್ಕೆ ದಿನನಿತ್ಯವೂ ವರದಿಯಾಗುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿದೆ.

ಬೆಂಗಳೂರು: ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ಪ್ರಕರಣವನ್ನು ರಾಜ್ಯ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಶಾಸಕ ಸ್ಥಾನದಿಂದ ಕೆಳಗಿಳಿಸಲು ಡಿಕೆ ಸಹೋದರರು ನಡೆಸಿರುವ ಷಡ್ಯಂತ್ರವಿದು ಎಂದು ವಾಗ್ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ರಾಜರಾಜೇಶ್ವರಿ ನಗರ ಶಾಸಕರಾದ ಮುನಿರತ್ನ ಅವರ ಮೇಲೆ ಗೂಂಡಾಗಳು ಹಲ್ಲೆ ನಡೆಸಿರುವುದು ಖಂಡನೀಯ. ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿರುವುದಕ್ಕೆ ದಿನನಿತ್ಯವೂ ವರದಿಯಾಗುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿದೆ ಎಂದು ಹೇಳಿದೆ.

ಕೆಲವೇ ದಿನಗಳ ಹಿಂದೆ ಶಕ್ತಿಸೌಧದೊಳಗೆ ರೌಡಿಗಳನ್ನು ಒಳಬಿಟ್ಟು ಪರಿಷತ್‌ ಸದಸ್ಯರ ಮೇಲೆ ಹಲ್ಲೆ ಮಾಡಿಸಿದ್ದ ಕಾಂಗ್ರೆಸ್ ಸರ್ಕಾರ, ಈಗ ಜನಪ್ರತಿನಿಧಿಯೊಬ್ಬರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿಸಿದೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲವೆಂದ ಮೇಲೆ ಜನಸಾಮಾನ್ಯರ ಗತಿಯೇನು? ಸರ್ಕಾರಿ ಪ್ರಾಯೋಜಿತ ಹಲ್ಲೆ, ದಾಳಿಗಳ ಮೂಲಕ ದ್ವೇಷದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ ಎಂದು ವಾಗ್ದಾಳಿ ನಡೆಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಶಾಸಕ ಸ್ಥಾನದಿಂದ ಕೆಳಗಿಳಿಸಲು ಡಿಕೆ ಸಹೋದರರ ಷಡ್ಯಂತ್ರ ರೂಪಿಸಿದ್ದಾರೆಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ಜನಪ್ರತಿನಿಧಿಗಳಿಗೆ ರಕ್ಷಣೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತಿಕೊಂಡಿರುವ ಗೂಂಡಾಗಳು ಬಿಜೆಪಿ ಶಾಸಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಶಾಸಕ ಶ್ರೀ ಸಿ.ಟಿ ರವಿ ಅವರ ಮೇಲೆ ನಡೆದ ಹಲ್ಲೆಯ ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿರುವ ಸರ್ಕಾರದ ಧೋರಣೆಯಿಂದ ಪ್ರೇರಣೆ ಪಡೆದಿರುವ ಕಾಂಗ್ರೆಸ್ ಗೂಂಡಾಗಳು ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಅತ್ಯಂತ ಹ್ಯೇಯಕರ ಹಾಗೂ ಖಂಡನೀಯ.

ಜನರಿಗೆ ರಕ್ಷಣೆ ನೀಡಬೇಕಾದ ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲವೆಂದರೆ ಸಾಮಾನ್ಯ ಜನರ ಪಾಡೇನು ಎಂಬ ಆತಂಕ ಉಲ್ಬಣಗೊಳ್ಳುತ್ತಿದೆ. ಸಾಮಾಜಿಕ ಸುಭದ್ರತೆಯಿಲ್ಲದ ಅರಾಜಕತೆಯ ರಾಜ್ಯವನ್ನು ನಿರ್ಮಿಸಲು ಕಾಂಗ್ರೆಸ್ ಹೊರಟಂತಿದೆ. ಶಾಸಕ ಮುನಿರತ್ನ ಅವರ ಮೇಲೆ ಆಪಾದನೆಗಳೇನೇ ಇರಲಿ ಅದಕ್ಕೆ ನ್ಯಾಯದ ಪರಿಧಿಯಲ್ಲಿ ಉತ್ತರ ಸಿಗುತ್ತದೆ. ಆದರೆ ಜನರಿಂದ ಆಯ್ಕೆಯಾದ ಶಾಸಕರೊಬ್ಬರನ್ನು ಹಾಡು ಹಗಲಲ್ಲೇ ಹತ್ಯೆ ಮಾಡುವ ಸಂಚುರೂಪಿಸಿ ಹಲ್ಲೆ ನಡೆಸುವ ಪರಿಸ್ಥಿತಿ ಉದ್ಭವಿಸಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ.

ಕಾನೂನು ಸುವ್ಯವಸ್ಥೆಯು ಸಂಪೂರ್ಣ ಆದೋಗತಿಗೆ ಇಳಿದಿರುವ ಪರಿಸ್ಥಿತಿಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ ಹೋರಾಟ ಕೈಗೆತ್ತಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುನಿರತ್ನ ಅವರ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ತೇಪೆ ಸಾರಿಸಲು ಪ್ರಯತ್ನಿಸಿದರೆ ತಕ್ಕನಾದ ಉತ್ತರ ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಿದ್ಧವಾಗಿರಬೇಕಾಗುತ್ತದೆ ಎಂದು ಎಚ್ಚರಿಸ ಬಯಸುತ್ತೇನೆಂದು ತಿಳಿಸಿದ್ದಾರೆ.

ಘಟನೆ ಬೆನ್ನಲ್ಲೇ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಮುನಿರತ್ನ ಅವರನ್ನು ವಿಜಯೇಂದ್ರ ಅವರು ಭೇಟಿ ಮಾಡಿ, ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುನಿರತ್ನ ಅವರ ಅಧಿಕೃತ ಗನ್‌ಮ್ಯಾನ್'ನ್ನು ಹಿಂತೆಗೆದುಕೊಳ್ಳಲಾಗಿದ್ದು, ಭವಿಷ್ಯದಲ್ಲಿ ಯಾರಾದರೂ ಚೂರಿ ಇರಿದರು, ಇದಕ್ಕೆ ಸಾಕ್ಷ್ಯ ಇಲ್ಲದಂತೆ ಮಾಡಲಾಗಿದೆ. ಮುನಿರತ್ನ ಮೇಲಿನ ಹಲ್ಲೆ ಸಣ್ಣ ಘಟನೆಯಲ್ಲ. ಶಾಸಕರು ರಾಜೀನಾಮೆ ನೀಡುವಂತ ಮಾಡಲು ಕೆಲ ದಿನಗಳಿಂದ ಸಂಚು ನಡೆಯುತ್ತಿದೆ. ತಮ್ಮ ಕುಟುಂಬವನ್ನು "ಗೂಂಡಾಗಳಿಂದ" ಕಾಂಗ್ರೆಸ್ ಭಯ ಪಡಿಸಲು ಯತ್ನಿಸುತ್ತಿದೆ ಎಂದು ಮುನಿರತ್ನ ಅವರ ಬೆಂಬಲಿಗರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ನನ್ನ ಬಳಿ ಹೇಳಿಕೊಂಡಿದ್ದಾರೆ.

ಮುನಿರತ್ನ ಅವರು ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವೆಲ್ಲವೂ ವಿಭಿನ್ನ ವಿಚಾರ, ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಬಿಜೆಪಿ ಶಾಸಕರ ಮೇಲಿನ ದಾಳಿಯನ್ನು ಸಹಿಸುವುದಿಲ್ಲ. ಪಕ್ಷದ ಮುಖ್ಯಸ್ಥನಾಗಿ ನಾನು ಮುನಿರತ್ನ ಅವರ ಜೊತೆ ನಿಂತು ನನ್ನ ಕರ್ತವ್ಯವನ್ನು ಮಾಡಿದ್ದೇನೆ.

ತೋಳ್ಬಲ, ಅಧಿಕಾರ ಬಲದಿಂದ ಬಿಜೆಪಿಗರನ್ನು ಬಗ್ಗುಬಡಿಯಬಹುದು, ಪ್ರಜಾಪ್ರಭುತ್ವದ ಕತ್ತು ಹಿಸುಕಿ ಜನಪ್ರತಿನಿಧಿಗಳನ್ನು ಬೆದರಿಸಬಹುದು ಎಂಬ ಸೂತ್ರವನ್ನು ಕಾಂಗ್ರೆಸ್ ಸರ್ಕಾರ ಅಳವಡಿಸಿಕೊಂಡಂತೆ ಕಾಣುತ್ತಿದೆ. ಶಾಸಕ ಮಿತ್ರ ಮುನಿರತ್ನ ಅವರ ಬೆಂಬಲಿಗರಿಗೂ ಸಹ ಬೆದರಿಸುವ ಸುಳ್ಳು ಕೇಸುಗಳನ್ನು ದಾಖಲಿಸುವ ಹೀನ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಇದರ ಹಿಂದಿರುವ ಖೂಳಶಕ್ತಿ ಯಾವುದು ಎಂಬುದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನತೆಗೆ ತಿಳಿದೇ ಇದೆ.

ಅಂದು ಹರೀಶ್ ಪೂಂಜಾ, ಮೊನ್ನೆ ಸಿ.ಟಿ.ರವಿ, ಇಂದು ಮುನಿರತ್ನ ಹೀಗೆ ಒಬ್ಬರಾದ ಮೇಲೆ ಒಬ್ಬ ಶಾಸಕರನ್ನು ಟಾರ್ಗೆಟ್ ಮಾಡಿಕೊಂಡು ತುರ್ತು ಪರಿಸ್ಥಿತಿಯ ಕರಾಳ ನೃತ್ಯವನ್ನು ಮತ್ತೆ ವಿಜೃಂಭಿಸಲು ಕಾಂಗ್ರೆಸಿಗರು ಹೊರಟಿದ್ದಾರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂತಹ ದಮನಕಾರಿ ಧೋರಣೆಯನ್ನು ನೋಡಿಕೊಂಡು ಸುಮ್ಮನಿರಲು ಬಿಜೆಪಿಯ ಕಾರ್ಯಕರ್ತರು ರಣಹೇಡಿಗಳಲ್ಲ, ಪ್ರಜಾಸತ್ತಾತ್ಮಕ ರೀತಿಯಲ್ಲೇ ಕಾಂಗ್ರೆಸಿಗರಿಗೆ ಬುದ್ಧಿ ಕಲಿಸುವ ಮಾರ್ಗ ನಮಗೂ ತಿಳಿದಿದೆ. ಪೊಲೀಸ್ ಅಧಿಕಾರಿಗಳು ಮಿತಿಮೀರಿ ಸರ್ಕಾರದ ‘ಕೈ’ಗೊಂಬೆಗಳಂತೆ ವರ್ತಿಸುತ್ತಿದ್ದಾರೆ, ಭವಿಷ್ಯತ್ತಿನಲ್ಲಿ ಇದಕ್ಕೆ ತಕ್ಕ ಪ್ರತಿಫಲವನ್ನು ಅವರು ಅನುಭವಿಸಲೇ ಬೇಕಾಗುತ್ತದೆ ಎಂಬ ಎಚ್ಚರ ಪೊಲೀಸ್ ಅಧಿಕಾರಿಗಳಿಗಿರಲಿ.

ಶಾಸಕ ಮುನಿರತ್ನ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸತ್ಯಾಸತ್ಯತೆ ನ್ಯಾಯಾಲಯದಲ್ಲಿ ಅನಾವರಣಗೊಳ್ಳಲಿದೆ, ಈ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ಗೂಂಡಾಗಳನ್ನು ಬಳಸಿಕೊಂಡು ದೌರ್ಜನ್ಯ ನಡೆಸುವುದನ್ನು ಸಹಿಸಿಕೊಂಡು ಕೂರಲಾಗುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಕಾಂಗ್ರೆಸ್ ಸರ್ಕಾರಕ್ಕೆ ರವಾನಿಸಲು ಬಯಸುತ್ತೇನೆಂದು ಹೇಳಿದರು.

ಘಟನೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಬಿಜೆಪಿಯ ಶಾಸಕ ಶ್ರೀ ಮುನಿರತ್ನರವರ ಮೇಲೆ ಮೊಟ್ಟೆ ಎಸೆದ ಪ್ರಕರಣ ರಾಜ್ಯ ಸರ್ಕಾರದ ದುರಾಡಳಿತಕ್ಕೆ ಕೈಗನ್ನಡಿಯಾಗಿದೆ. ಕಾನೂನು ಕೈಗೆ ತೆಗೆದುಕೊಳ್ಳುವುದು ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲಾ. ಕಾನೂನು ಕೈಗೆ ತೆಗೆದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ?ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ, ಸಂಜಯ್ ಗಾಂಧಿಯಂತೆ ಮುಖ್ಯಮಂತ್ರಿ ಮಾಡುತ್ತಿರುವುದು ಸರಿಯಲ್ಲ. ಸಿಟಿ ರವಿ ಪ್ರಕರಣ ಇರಲಿ, ಮುನಿರತ್ನ ಪ್ರಕರಣವೇ ಇರಲಿ. ಈ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು.

ಇವತ್ತಿಗೂ ಸಿ.ಟಿ. ರವಿಯವರ ದೂರು ಆಧರಿಸಿ ಎಫ್‍ಐಆರ್ ದಾಖಲಿಸಿಲ್ಲ; ಸ್ವಯಂಪ್ರೇರಿತ ಆಗಿದೆ ಎನ್ನುತ್ತಾರೆ, ಯಾಕೆ ದೂರು ದಾಖಲಿಸಿಲ್ಲ ಎಂದು ವಕೀಲರು ಕೇಳಿದರೆ ಕಮಿಷನರ್, ಸಿಐಡಿಗೆ ವರ್ಗಾವಣೆ ಆಗಿದೆ ಎನ್ನುತ್ತಾರೆ. ಆದರೆ, ನೀವು ಎಫ್‍ಐಆರ್ ಮಾಡಿ ಪ್ರಕರಣ ವರ್ಗಾಯಿಸಬೇಕು. ಖಾನಾಪುರದ ಸಬ್ ಇನ್‍ಸ್ಪೆಕ್ಟರ್ ಮಂಜುನಾಥ ನಾಯಕ್ ಅವರನ್ನು ಅಮಾನತು ಮಾಡಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಭಯ ಹುಟ್ಟಿಸುವ ಕೆಲಸ ನಡೆದಂತಿದೆ. ಸಿ.ಟಿ. ರವಿಯವರನ್ನು ಮಾತನಾಡಿಸಬಾರದೆಂದು ಆರ್.ಅಶೋಕ್, ವಿಜಯೇಂದ್ರ ಮತ್ತು ವಕೀಲರನ್ನು ಹೊರಗಡೆ ಕೂರಿಸಿದ್ದರು. ಕಾಂಗ್ರೆಸ್ಸಿನವರು ಯಾವ ಕಾಲದಲ್ಲಿದ್ದಾರೆ? ಕಮಿಷನರ್ ಬಂದು ಮಾತನಾಡಿಲ್ಲ, ಪ್ರಜಾಪ್ರಭುತ್ವದಲ್ಲಿ ಕಾನೂನಿನ ಪ್ರಕಾರ, ಸಂವಿಧಾನದನ್ವಯ ನಡೆದುಕೊಳ್ಳಬೇಕು. ನೆಹರೂ ಕಾಲದಿಂದ ಈಗಿನವರೆಗೆ ಕಾಂಗ್ರೆಸ್ ಪಕ್ಷದವರು ಸಂವಿಧಾನ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರರ ಬಗ್ಗೆ ತಿರಸ್ಕಾರದ ಭಾವನೆ ಹೊಂದಿದ್ದಾರೆ ಎಂದು ದೂರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT