ಬೆಂಗಳೂರು: ಜಮೀನು ವಿವಾದ ಹಿನ್ನೆಲೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ನಡೆದಿದೆ.
ಹೊಸಕೋಟೆಯ ಜಡಿಗೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಆತ್ಮಹತ್ಯೆ ಮಾಡಿಕೊಂಡವರು. ಹೊಸಹಳ್ಳಿ ರಸ್ತೆಯಲ್ಲಿ ವಾಸಿಸುತ್ತಿದ್ದ ನರಸಿಂಹ ಮೂರ್ತಿ ಗುರುವಾರ ರಾತ್ರಿ ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ಬೆಳಗ್ಗೆ ಅವರನ್ನು ನೇಣುಬಿಗಿದು ಸ್ಥಿತಿಯಲ್ಲಿ ನೋಡಿದ ಕುಟುಂಬದ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೂ.10 ಕೋಟಿ ಜಾಗದ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ತುಂಗಾನಗರದಲ್ಲಿ ನರಸಿಂಹಮೂರ್ತಿ ಅವರಿಗೆ ಸೇರಿದ 25 ಗುಂಟೆ ಜಮೀನಿದ್ದು,ಅದನ್ನು ಅವರ ಸಂಬಂಧಿ ಸತೀಶ್ ಎಂಬವರು ಜಮೀನು ಖರೀದಿಸುವುದಾಗಿ ಹೇಳಿ ಅಗ್ರಿಮೆಂಟ್ ಹಾಕಿಸಿಕೊಂಡಿದ್ದರು. ಆದರೆ, ಸತೀಶ್ ರೂ. 10 ಕೋಟಿ ಜಮೀನಿಗೆ ಕೇವಲ 10 ಲಕ್ಷ ಕೊಟ್ಟಿದ್ದು, ಉಳಿದ ಹಣ ಕೊಡದೆ ಜಮೀನು ಲಪಟಾಯಿಸಿದ್ದಾರೆ.
ಹಣ ಕೇಳಲು ಹೋದಾಗ ಧಮ್ಕಿ ಹಾಕಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಅವರು ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಪೊಲೀಸ್ ಆಯುಕ್ತ (ಡಿಸಿಪಿ-ಪಶ್ಚಿಮ) ಎಸ್.ಗಿರೀಶ್, ಮೂರ್ತಿ ಮತ್ತು ಅವರ ಸಂಬಂಧಿಕರ ನಡುವೆ ಜಮೀನು ವಿವಾದವಿದ್ದು, ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪೊಲೀಸರು ಡೆತ್ ನೋಟ್ ಪಡೆದಿದ್ದು, ದೌರ್ಜನ್ಯದ ಕೇಸ್ ಜೊತೆಗೆ ಬಿಎನ್‌ಎಸ್ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಸಹಾಯವಾಣಿ: ಆತ್ಮಹತ್ಯೆಯಂತಹ ಆಲೋಚನೆ ಹೊಂದಿದ್ದರೆ, ಅಥವಾ ಸ್ನೇಹಿತರ ಬಗ್ಗೆ ಚಿಂತೆ ಮಾಡುತ್ತಿದ್ದರೆ ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ ಸ್ನೇಹ ಫೌಂಡೇಶನ್ ಸಹಾಯವಾಣಿ 04424640050, ಟೆಲಿ ಮನಸ್ - 14416 (24x7 ಲಭ್ಯವಿದೆ) ಅಥವಾ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಹಾಯವಾಣಿ - 02225521111 ಗೆ ಕರೆ ಮಾಡಿ. ಇದು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿರುತ್ತದೆ.