ಬೆಂಗಳೂರು: ವಿವಾಹಿತೆ ಜೊತೆಗಿನ ಖಾಸಗಿ ಕ್ಷಣಗಳ ಪೋಟೋ, ವಿಡಿಯೋಗಳನ್ನು ಇಟ್ಟುಕೊಂಡು ಬೆದರಿಸಿ ಸುಲಿಗೆ ಮಾಡಿದ್ದಲ್ಲದೇ, ಅವುಗಳನ್ನು ವೈರಲ್ ಮಾಡಿದ ಆರೋಪದ ಮೇಲೆ ರೌಡಿ ಸುರೇಶ್ ಆಲಿಯಾಸ್ ಕುಣಿಗಲ್ ಸೂರಿ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
37 ವರ್ಷದ ಸಂತ್ರಸ್ತ ಮಹಿಳೆ ದೂರಿನ ಅನ್ವಯ ಸದ್ಯ ಪ್ರಕರಣವೊಂದರಲ್ಲಿ ಜೈಲಿನಲ್ಲಿರುವ ಕುಣಿಗಲ್ ಸೂರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಬಾಡಿ ವಾರೆಂಟ್ ಪಡೆದು ಆರೋಪಿಯ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಗೆ ಸೇರಿದ ಮನೆಯನ್ನು ಭೋಗ್ಯಕ್ಕೆ ಪಡೆದಿದ್ದ ಆರೋಪಿ ಹಲವು ವರ್ಷಗಳಿಂದ ಅಲ್ಲಿಯೇ ವಾಸವಿದ್ದ. ತಾನು ಕ್ಯಾಬ್ ಚಾಲಕ ಎಂದು ಪರಿಚಯಿಸಿಕೊಂಡಿದ್ದ ಆರೋಪಿ ಮಹಿಳೆಯ ಸ್ನೇಹ ಸಂಪಾದಿಸಿ ಸಲುಗೆಯಿಂದಿದ್ದ. ಈ ನಡುವೆ ಇಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆದಿತ್ತು. ಮಹಿಳೆಯ ವಿರೋಧದ ನಡುವೆ ಖಾಸಗಿ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದುಕೊಂಡಿದ್ದ ಎನ್ನಲಾಗಿದೆ.
ಆರೋಪಿಯ ಮೊಬೈಲ್ ನಲ್ಲಿ ಹಲವು ಮಹಿಳೆಯರ ಖಾಸಗಿ ವಿಡಿಯೋ, ಪೋಟೋ ಇರುವುದನ್ನು ಗಮನಿಸಿದ್ದ ಸಂತ್ರಸ್ತೆ ಆತನನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಕೋಪಗೊಂಡು ಮಹಿಳೆಯ ಖಾಸಗಿ ಕ್ಷಣಗಳ ಫೋಟೋ, ವಿಡಿಯೋ ತೋರಿಸಿ ಸುಲಿಗೆ ಮಾಡಲಾರಂಭಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಖಾಸಗಿ ಕ್ಷಣಗಳ ಫೋಟೋ, ವಿಡಿಯೋಗಳನ್ನು ಮಹಿಳೆಯ ಪತಿ ಹಾಗೂ ಸಂಬಂಧಿಕರಿಗೆ ಕಳುಹಿಸಿದ್ದು, ಆಕೆಗೆ ಚಾಕು ತೋರಿಸಿ ಬೆದರಿಸಿ ಮೊಬೈಲ್, ಕಾರು ಹಾಗೂ 18 ಗ್ರಾಂ ಚಿನ್ನದ ಓಲೆ ದೋಚಿ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಠಾಣೆ ಪೊಲೀಸರು, ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಆತ ತುಮಕೂರು ನ್ಯಾಯಾಲಯದ ಬಳಿ ತನ್ನ ಸಹೋದರನಿಗೆ ಚಾಕು ಇರಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ಸದ್ಯ ಆರೋಪಿಯನ್ನು ಬಾಡಿ ವಾರೆಂಟ್ ಆಧಾರದ್ಲಿ ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.