ಕೋಲಾರ: ಸತತ ಬೆಲೆ ಕುಸಿತದಿಂದಾಗಿ ರೈತರೊಬ್ಬರು ತಮ್ಮ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆಯನ್ನು ಕಟಾವು ಮಾಡಿ ಉಚಿತವಾಗಿ ವಿತರಿಸಿದ್ದಾರೆ.
ಕೋಲಾರ ಜಿಲ್ಲೆಯ ಕೋಟೆಕನಹಳ್ಳಿಯ ಕೆ.ವೈ.ಗಣೇಶ್ ಗೌಡ ತಮ್ಮ ತೋಟದಲ್ಲಿ ಬಾಳೆ ಬೆಳೆದಿದ್ದರು. ಸ್ಥಳೀಯ ಸಗಟು ವ್ಯಾಪಾರಿಗಳು ಮತ್ತು ಹಣ್ಣಿನ ವ್ಯಾಪಾರಿಗಳು ಕೆಜಿಗೆ ಕೇವಲ 10 ರೂ. ಬೆಲೆ ನೀಡಲು ಬಂದರು ಹೀಗಾಗಿ ಉಚಿತವಾಗಿ ವಿತರಿಸಿದ್ದಾರೆ.
ಕಳೆದ ವರ್ಷ ವಡಗೂರು ಸೊಸೈಟಿಯಲ್ಲಿ 2 ಲಕ್ಷ ರೂಪಾಯಿ ಸಾಲ ಪಡೆದು 2,006 ಏಲಕ್ಕಿ ಬಾಳೆ ಸಸಿಗಳನ್ನು ನೆಟ್ಟಿದ್ದಾಗಿ ಗೌಡರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಒಟ್ಟಾರೆ ಬೆಳೆಗೆ 4.5 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಗಣೇಶ ಚತುರ್ಥಿ, ದೀಪಾವಳಿ, ವರಮಹಾಲಕ್ಷ್ಮಿ ಹಬ್ಬಗಳ ಸಂದರ್ಭದಲ್ಲಿ ಸ್ಥಳೀಯ ವಿತರಕರು ಇವರಿಂದ ಕಿಲೋಗ್ರಾಂಗೆ 60 ರೂ.ಗೆ ಬಾಳೆಹಣ್ಣು ಖರೀದಿಸಿ ಪ್ರತಿ ಕಿಲೋಗ್ರಾಂಗೆ 100 ರೂ.ಗೆ ಮಾರುತ್ತಿದ್ದರು. ಆದಾಗ್ಯೂ, ಅವರು ಈ ವಾರ 2,000 ಕಿಲೋಗ್ರಾಂಗಳಷ್ಟು ಬಾಳೆಹಣ್ಣುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದಾಗ, ಖರೀದಿದಾರರು ಅವರಿಗೆ ಲಾಭದಾಯಕ ಬೆಲೆಯನ್ನು ನೀಡಲಿಲ್ಲ.
ಬೆಳೆ ಕೊಯ್ಲಿಗೆ ಸಿದ್ಧವಾಗಿರುವುದರಿಂದ ಇನ್ನು ತಡ ಮಾಡಲು ಸಾಧ್ಯವಾಗಲಿಲ್ಲ. ಬೇರೆ ದಾರಿಯಿಲ್ಲದೆ ಕೂಲಿ ಕಾರ್ಮಿಕರನ್ನು ನೇಮಿಸಿ, ಬೆಳೆ ಕಟಾವು ಮಾಡಿ, ಕೋಟೆಕನಹಳ್ಳಿ ಹಾಗೂ ಸಮೀಪದ ಗ್ರಾಮಗಳ ಜನರಿಗೆ ಉಚಿತವಾಗಿ ಹಂಚಿದ್ದೇನೆ ಎಂದು ಗಣೇಶ್ ಗೌಡ ಹೇಳಿದರು.
ಕಳೆದ ವರ್ಷ ಟೊಮೆಟೊ ಬೆಳೆದು ನಷ್ಟ ಅನುಭವಿಸಿ ಬಾಳೆ ಕೃಷಿಗೆ ಮುಂದಾದರು ಎಂದು ಗೌಡರು ವಿವರಿಸಿದರು. ನಾನು ಬೆಳೆ ಕಟಾವು ಮಾಡಲು ಮತ್ತು ಹೊಸದಕ್ಕೆ ಭೂಮಿಯನ್ನು ಸಿದ್ಧಪಡಿಸಲು 35,000 ರೂ. ಖರ್ಚು ಮಾಡಿದ್ದೇನೆ, ನನ್ನ ಸಾಲವನ್ನು ತೀರಿಸುವುದರ ಜೊತೆಗೆ, ಹೊಸ ಬೆಳೆ ಬೆಳೆಯಲು ನಾನು ಹೂಡಿಕೆ ಮಾಡಬೇಕಾಗಿದೆ" ಎಂದು ಅವರು ಹೇಳಿದರು. ಮೂಲಗಳ ಪ್ರಕಾರ, ಮುಂದಿನ ತಿಂಗಳು ಸಂಕ್ರಾಂತಿ ವೇಳೆಗೆ ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಹಲವು ರೈತರು ಬಾಳೆ ಕೃಷಿ ಕೈಗೊಂಡಿದ್ದಾರೆ