ಬೆಂಗಳೂರು: ಪ್ರಗತಿಪರ ಹೋರಾಟಗಾರ, ದಲಿತ ಮುಖಂಡ ಲಕ್ಷ್ಮಿನಾರಾಯಣ ನಾಗವಾರ ನಿಧನರಾಗಿದ್ದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ದಲಿತ ಸಮುದಾಯವನ್ನೇ ತನ್ನ ಕುಟುಂಬವನ್ನಾಗಿಸಿಕೊಂಡಿದ್ದ ಲಕ್ಷ್ಮಿನಾರಾಯಣ ನಾಗವಾರ ಅವರು ಸಂಘಟನೆ ಮತ್ತು ಹೋರಾಟದ ಮೂಲಕ ದನಿ ಇಲ್ಲದ ದಮನಿತ ಸಮುದಾಯಕ್ಕೆ ದನಿಯಾಗಿದ್ದವರು. ರಾಜ್ಯದ ಯಾವ ಮೂಲೆಯಲ್ಲಿಯೂ ದಲಿತರ ಮೇಲೆ ಅನ್ಯಾಯ-ದೌರ್ಜನ್ಯ ನಡೆದರೂ ಅಲ್ಲಿಗೆ ಧಾವಿಸಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ಲಕ್ಷ್ಮಿನಾರಾಯಣ ನಾಗವಾರ ಅವರು, ಇಡೀ ರಾಜ್ಯ ಸುತ್ತಾಡಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸಿದವರು.
ಹೆಚ್ಚು ಕಡಿಮೆ ಮೂರು ದಶಕಗಳಿಂದ ನನ್ನ ಜೊತೆ ಒಡನಾಟ ಹೊಂದಿದ್ದ ಲಕ್ಷ್ಮಿನಾರಾಯಣ ನಾಗವಾರರ ನಿಧನದಿಂದ ನಾನೂ ಒಬ್ಬ ಆತ್ಮೀಯ ಸಂಗಾತಿಯನ್ನು ಕಳೆದುಕೊಂಡಿದ್ದೇನೆ. ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.