ರಾಜ್ಯ

ಗ್ಯಾರಂಟಿ ರದ್ದು ಹೇಳಿಕೆ; ಬಾಲಕೃಷ್ಣ ಶಾಸಕತ್ವ ರದ್ದುಗೊಳಿಸಲು ಜೆಡಿಎಸ್ ದೂರು

Srinivas Rao BV

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತ ಹಾಕಿದರೆ ಮಾತ್ರ ಗ್ಯಾರೆಂಟಿ ಯೋಜನೆ ಮುಂದುವರೆಯುತ್ತದೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದ ಮಾಗಡಿ ಕ್ಷೇತ್ರದ ಶಾಸಕ ಹೆಚ್.ಸಿ.ಬಾಲಕೃಷ್ಣ ವಿರುದ್ಧ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮುಖ್ಯ ಚುನಾವಣಾ ಆಯೋಗ ಕಚೇರಿಗೆ ದೂರು ನೀಡಿದ್ದು, ಶಾಸಕರು ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಬಾಲಕೃಷ್ಣ ಅವರ ಶಾಸಕತ್ವವನ್ನು ರದ್ದು ಮಾಡಬೇಕು ಹಾಗೂ ಕಾಂಗ್ರೆಸ್ ಪಕ್ಷದ ಮಾನ್ಯತೆಯನ್ನೂ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಜನವರಿ 30ರಂದು ರಾಮನಗರ ಜಿಲ್ಲೆಯಲ್ಲಿ ಮಾತನಾಡಿದ್ದ ಶಾಸಕರು ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್​​ಗೆ ಮತ ಹಾಕಿಲ್ಲ ಅಂದರೆ ಗ್ಯಾರಂಟಿ ಯೋಜನೆಗಳು ಇರುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು.

ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿಖಿಲ್, ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು. ಹೀಗಾಗಿ ರಾಜ್ಯದ ಜನರು ಕಾಂಗ್ರೆಸ್ ಗೆ ಅಧಿಕಾರ ನೀಡಿದರು. ಆದ್ರೆ, ಈಗ ಗ್ಯಾರಂಟಿ ಸಂಬಂಧ ಕಾಂಗ್ರೆಸ್ ನವರು ಬಹಿರಂಗ ವೇದಿಕೆಯಲ್ಲಿ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಗ್ಯಾರಂಟಿಗಳನ್ನ ಮುಂದಿಟ್ಟುಕೊಂಡು ಬ್ಲಾಕ್ ಮೈಲ್ ಸಂಸ್ಕೃತಿ ಅನುಸರಿಸುತ್ತಿದ್ದಾರೆ. ಮತ ಹಾಕಲಿಲ್ಲ ಅಂದ್ರೆ ಗ್ಯಾರಂಟಿಗಳನ್ನ ನಿಲ್ಲಿಸೋದಾಗಿ ಹೆದರಿಸುತ್ತಿದ್ದಾರೆ. ಇದು ಖಂಡನೀಯ, ಹೀಗಾಗಿ ಅವರ ವಿರುದ್ಧ ಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.

SCROLL FOR NEXT