ರಾಜ್ಯ

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಬಹಿರಂಗವಾಗಿಯೇ ಉಲ್ಲಂಘನೆಯಾಗುತ್ತಿದೆ: ಶಾಸಕ ಪ್ರಭು ಚೌಹಾಣ್

Manjula VN

ಬೀದರ್: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಬಹಿರಂಗವಾಗಿಯೇ ಕಾಯ್ದೆಯನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಪ್ರಭು ಚೌಹಾಣ್ ಅವರು ಸೋಮವಾರ ಆರೋಪಿಸಿದರು.

ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರಕಾರ ರಾಜ್ಯದಲ್ಲಿ  ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿತ್ತು. ಆದರೆ, ಇದು ಕಾಯ್ದೆ ಬಹಿರಂಗವಾಗಿಯೇ ಉಲ್ಲಂಘನೆಯಾಗುತ್ತಿದೆ. ನಾನು ಪಶುಸಂಗೋಪನೆ ಸಚಿವನಾಗಿದ್ದಾಗ ರಾಜ್ಯದಲ್ಲಿ 27 ಗೋಶಾಲೆಗಳನ್ನು (ಗೋಸಂರಕ್ಷಣಾ ಕೇಂದ್ರ) ಆರಂಭಿಸಿದ್ದೆ ಆದರೆ, ಈ ಗೋಸಂರಕ್ಷಣಾ ಕೇಂದ್ರಗಳ ಅಭಿವೃದ್ಧಿಯನ್ನು ನಿಲ್ಲಿಸಲಾಗಿದೆ. ಜಾನುವಾರುಗಳ ರಕ್ಷಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದರು.

5 ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಮೋಸ ಮಾಡಿದೆ. ರಾಜ್ಯದಲ್ಲಿರುವ ಈಗಿನ ಪಶುಸಂಗೋಪನಾ ಸಚಿವರಿಗೆ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿಯೇ ಇಲ್ಲ. ‘ಸಚಿವರು ಯಾವುದೇ ಜಿಲ್ಲೆಗೆ ಭೇಟಿ ನೀಡಿಲ್ಲ, ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ ಎಂದು ಆರೋಪಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಮ್ಮಿಕೊಂಡಿದ್ದ ಹಲವು ಯೋಜನೆಗಳು ಸ್ಥಗಿತಗೊಂಡಿವೆ. ಸರಕಾರ ಹೈನುಗಾರರಿಗೆ 716 ಕೋಟಿ ರೂ.ಗಳನ್ನು ಪ್ರೋತ್ಸಾಹಧನವಾಗಿ ಪಾವತಿಸಬೇಕಿದೆ. ಆದರೆ ಯಾವುದೇ ಪ್ರೋತ್ಸಾಹ ನೀಡಿಲ್ಲ. ಇದರಿಂದ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ರಾಜ್ಯ ಸರಕಾರಕ್ಕೆ ಹೈನುಗಾರರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಕೂಡಲೇ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್, ಮುಖಂಡರಾದ ವಿಜಯಕುಮಾರ ಪಾಟೀಲ್ ಗಡಗಿ, ವಸಂತ ಬಿರಾದಾರ್, ಅಶೋಕ ಹೊಕ್ರಾಣಿ ಉಪಸ್ಥಿತರಿದ್ದರು.

SCROLL FOR NEXT