ರಾಜ್ಯ

ನಮಾಜ್‌ಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಮಯ ಬದಲು: ಮುತಾಲಿಕ್‌ ಆರೋಪ

Manjula VN

ಬೆಳಗಾವಿ: ಎಸ್‍ಎಸ್‍ಎಲ್‍ಸಿ ಪರೀಕ್ಷಾ ವೇಳಾಪಟ್ಟಿ ನಿಗದಿಯಲ್ಲೂ ಮುಸ್ಲಿಂ ತುಷ್ಟೀಕರಣಕ್ಕೆ ಸರ್ಕಾರ ಮುಂದಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಓಟಿಗಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆಯಲ್ಲೂ ವೇಳಾಪಟ್ಟಿ ಬದಲಿಸಲಾಗಿದೆ. ಫೆ.26ರಿಂದ ಮಾರ್ಚ 2ರ ವರೆಗೆ‌ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕಗಳನ್ನು ಘೋಷಣೆ ಮಾಡಿದ್ದಾರೆ. ಎಲ್ಲಾ ಪರಿಕ್ಷೆಗಳೂ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ನಡೆಯುತ್ತವೆ ಎಂದು ಸಮಯ ನಿಗದಿಪಡಿಸಿದ್ದಾರೆ. ಅದರಲ್ಲಿ ಮಾರ್ಚ್‌ 1ನೇ ದಿನಾಂಕ ಶುಕ್ರವಾರ ಇದೆ. ಅಂದು ಮಧ್ಯಾಹ್ನ 2 ಗಂಟೆಯಿಂದ ಪರೀಕ್ಷೆ ಪ್ರಾರಂಭವಾಗುವಂತೆ ನಿಗದಿಪಡಿಸಲಾಗಿದೆ. ಇದು ನಮಾಜು ಮಾಡುವುದಕ್ಕಾಗಿ ಎಂದು ಆರೋಪಿಸಿದ್ದಾರೆ.

ಕೆಲವೇ ಮಂದಿ ಮುಸ್ಲಿಮರಿಗೋಸ್ಕರ ಇಡೀ ಶಿಕ್ಷಣ ವ್ಯವಸ್ಥೆ ಬದಲಾವಣೆ ಮಾಡಿದ್ದಾರೆ. ಕೆಲವೇ ಕೆಲವು ಮುಸ್ಲಿಂ ವಿದ್ಯಾರ್ಥಿ- ಶಿಕ್ಷಕರಿಗೋಸ್ಕರ ಸಮಯ ಬದಲಾವಣೆ‌ ಮಾಡಿದ್ದಾರೆ. ಲಕ್ಷಾಂತರ ಹಿಂದು ವಿದ್ಯಾರ್ಥಿಗಳ ಮೇಲೆ ಇದನ್ನು ಹೇರಲಾಗುತ್ತಿದೆ. ಸರ್ಕಾರ ಕೂಡಲೆ ಇದನ್ನು ವಾಪಾಸ್ ತಗೊಂಡು ಸಮಯ ಬದಲಾವಣೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ಮಾದರಿಯಲ್ಲಿ ಪರೀಕ್ಷೆ ಸಮಯದಲ್ಲಿ ಹಿಜಾಬ್‌ಗೆ ಅನುಮತಿ ನೀಡಿದಿರಿ. ಹಿಂದೂ ಹುಡುಗಿಯರ ಉಂಗುರ- ತಾಳಿಯನ್ನು ತೆಗೆಸಿದವರು ನೀವು. ಮುಸ್ಲಿಂ ಸಮ್ಮೇಳನದಲ್ಲಿ 10 ಸಾವಿರ ಕೋಟಿ ಕೊಡುತ್ತೇವೆ ಎಂದು ಘೋಷಣೆ ಮಾಡಿದಿರಿ. ಕರಸೇವಕರ ಹಳೆ ಕೇಸ್‌ಗಳನ್ನು ಓಪನ್ ಮಾಡಿ ತೊಂದರೆ ಕೊಟ್ಟಿರಿ. ಹೀಗೆ ಅನೇಕ ಪ್ರಸಂಗಗಳನ್ನು ಇವತ್ತು ಸೃಷ್ಟಿ ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ. ಟಿಪ್ಪು ಸುಲ್ತಾನ್, ಔರಂಗಜೇಬ, ಬಾಬರ್‌ನ ಆಡಳಿತ ಮತ್ತೆ ಪುನಃ ಆರಂಭ ಮಾಡುವ ನಿಮ್ಮ ಸಂಚು ಎದ್ದು ಕಾಣಿಸುತ್ತಿದೆ ಎಂದು ಟೀಕಿಸಿದರು.

SCROLL FOR NEXT