ರಾಜ್ಯ

ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ: ಇಂಧನ ಸಚಿವ ಕೆಜೆ ಜಾರ್ಜ್

Manjula VN

ಮಂಗಳೂರು: ಪರೀಕ್ಷೆ ಹಾಗೂ ಬೇಸಿಗೆ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸೋಮವಾರ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳೊಂದಿಗೆ ನಡೆದ ಮೆಸ್ಕಾಂ ಕೆಪಿಟಿಸಿಎಲ್​ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆ ಕಡಿಮೆಯಿದ್ದ ಕಾರಣ ಸರ್ಕಾರ 4-5 ವರ್ಷಗಳಿಂದ ವಿದ್ಯುತ್ ಖರೀದಿ ಮಾಡಿರಲಿಲ್ಲ. ಆದರೆ, ಈ ವರ್ಷ ಮಳೆ ಕೊರೆಯಿಂದಾಗಿ ಬೇಡಿಕೆ ಹೆಚ್ಚಾಗಿದೆ. ಪ್ರತಿಕೂಲ ಹವಾಮಾನದಿಂದಲೂ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಹೊಡೆತ ಬಿದ್ದಿದೆ. ಇದಲ್ಲದೆ, ಕಲ್ಲಿದ್ದಲು ಗಣಿಗಾರಿಕೆ ಪ್ರದೇಶಗಳಲ್ಲಿ ಮಳೆಯಿಂದಾಗಿ ರಾಜ್ಯವು ಗುಣಮಟ್ಟದ ಕಲ್ಲಿದ್ದಲು ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಬೇಸಿಗೆಯಲ್ಲಿನ ವಿದ್ಯುತ್ ಅಗತ್ಯವನ್ನು ಪೂರೈಸಲು, ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಶೀಘ್ರದಲ್ಲೇ ಟೆಂಡರ್‌ಗಳನ್ನು ಕರೆಯಲಾಗುವುದು ಎಂದ ಹೇಳಿದರು.

ಕರ್ನಾಟಕವು ಈಗಾಗಲೇ ಉತ್ತರ ಪ್ರದೇಶ ಮತ್ತು ಪಂಜಾಬ್‌ನೊಂದಿಗೆ ಬಾರ್ಟರ್ ವ್ಯವಸ್ಥೆಯಡಿ ವಿದ್ಯುತ್ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಹಿಂದೆ ದೆಹಲಿಗೆ ಹಂಚಿಕೆಯಾಗಿದ್ದ ಕೂಡ್ಲಿಗಿಯ ಕೇಂದ್ರ ಗ್ರಿಡ್‌ನಿಂದ ಕರ್ನಾಟಕಕ್ಕೂ 100 ಮೆಗಾವ್ಯಾಟ್ ವಿದ್ಯುತ್ ಸಿಗಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಯಲಹಂಕದಲ್ಲಿ ಗ್ಯಾಸ್ ಸ್ಟೇಷನ್ ಈ ತಿಂಗಳ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡಲಿದ್ದು, ಇದು 380 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ. ಶರಾವತಿ ಮತ್ತು ವಾರಾಹಿಯಲ್ಲಿ ಪಂಪ್ಡ್ ಸ್ಟೋರೇಜ್ ಹೈಡ್ರೊಪವರ್ ಮೂಲಕ ವಿದ್ಯುತ್ ಉತ್ಪಾದಿಸುವ ಕೆಲಸ ಆರಂಭಿಸಿದ್ದೇವೆ. ಇದರಿಂದ ಈ ಸ್ಥಳಗಳಲ್ಲಿ ವಿದ್ಯುತ್ ಉತ್ಪಾದನೆಯು 3,500 ಮೆಗಾವ್ಯಾಟ್‌ಗಳಷ್ಟು ಹೆಚ್ಚಾಗಲಿದೆ ಎಂದು ಹೇಳಿದರು.

KUSUM-C ಫೀಡರ್ ಸೋಲಾರೈಸೇಶನ್ ಯೋಜನೆಯಡಿ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಸರ್ಕಾರಿ ಭೂಮಿ ಲಭ್ಯವಿದ್ದು, ರಾಜ್ಯದಲ್ಲಿ 800 ಕ್ಕೂ ಹೆಚ್ಚು ವಿದ್ಯುತ್ ಉಪ ಕೇಂದ್ರಗಳನ್ನು ಇಂಧನ ಇಲಾಖೆ ಗುರುತಿಸಿದೆ. ಸರ್ಕಾರವು ಕಂದಾಯ ಭೂಮಿಯನ್ನು ಇಂಧನ ಇಲಾಖೆಗೆ ಉಚಿತವಾಗಿ ನೀಡಲಿದ್ದು, ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಪ್ರತಿ ಎಕರೆಗೆ ರೂ 25,000 ಲೀಸ್ ಬಾಡಿಗೆಯಂತೆ ಗುತ್ತಿಗೆದಾರರಿಗೆ ನೀಡಲಾಗುವುದು. ಉತ್ಪಾದಿಸಿದ ಶಕ್ತಿಯನ್ನು ಸ್ಥಳೀಯ ಗ್ರಿಡ್‌ಗೆ ನೀಡಲಾಗುವುದು ಮತ್ತು ಗುತ್ತಿಗೆ ಬಾಡಿಗೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಅಭಿವೃದ್ಧಿ ಕಾರ್ಯಗಳಿಗಾಗಿ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಸರ್ಕಾರವು ಮೇಲ್ಛಾವಣಿಯ ಸೌರಶಕ್ತಿ ಯೋಜನೆ ಜಾರಿಗೆ ಉತ್ಸುಕವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಬೆಂಬಲವನ್ನು ನಿರೀಕ್ಷಿಸುತ್ತಿದ್ದೇವೆ. ಸದ್ಯಕ್ಕೆ ರಾಜ್ಯ ಸರ್ಕಾರ ಇಂತಹ ಕ್ರಮಗಳಿಗೆ ಶೇ.40ರಷ್ಟು ಸಹಾಯಧನ ನೀಡುತ್ತಿದೆ ಎಂದರು.

ರಾಜ್ಯಾದ್ಯಂತ 6,000 ಲೈನ್‌ಮನ್‌ಗಳನ್ನು ನೇಮಕ ಮಾಡಲು ಇಂಧನ ಇಲಾಖೆ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 3,000 ಮಂದಿಯನ್ನು ನೇಮಿಸಲಾಗುವುದು ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು.

ಹೊಸದಾಗಿ ನೇಮಕಗೊಂಡವರು ಸ್ವಗ್ರಾಮಕ್ಕೆ ವರ್ಗಾವಣೆ ಬಯಸಿ ಬರುವುದನ್ನು ತಡೆಯಲು ಇಲಾಖೆಯಿಂದ ಅದೇ ದಿನ ರಾಜ್ಯಾದ್ಯಂತ ಸಂದರ್ಶನ ನಡೆಸಲಾಗುವುದು. ಮಂಗಳೂರು ಸೇರಿ ಹಲವೆಡೆ ಸಿಬ್ಬಂದಿಗಳ ಕೊರತೆಯಿದ್ದು, ಇಲಾಖೆಯು ಯುವಕರಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಒದಗಿಸಲಿದೆ ಎಂದು ಹೇಳಿದರು.

ಗ್ರೀನ್ ಹೈಡ್ರೋಜನ್ ವಿದ್ಯುತ್​ ಉತ್ಪಾದನೆ ಯೋಜನಗೆ ಮಂಗಳೂರು ಸೂಕ್ತ ಪ್ರದೇಶವಾಗಿದ್ದು, ಇಲ್ಲಿ ಸಮುದ್ರ, ಬಂದರು ವ್ಯವಸ್ಥೆ ಇದೆ. ಹಾಗಾಗಿ ಇಲ್ಲಿ ಪೈಲಟ್ ಯೋಜನೆ ಕೈಗೆತ್ತಿಕೊಳ್ಳುವುದು ಸೂಕ್ತವಾಗಿದೆ. ಇದಕ್ಕೆ ದೊಡ್ಡ ಕೈಗಾರಿಕೆಗಳು ಮುಂದೆ ಬರಬೇಕಾಗಿದೆ. ಜಾಗತಿಕ ಹೂಡಿಕೆ ಸಮಾವೇಶದಲ್ಲಿಯೂ ಬಹಳಷ್ಟು ಕೈಗಾರಿಕೋದ್ಯಮಿಗಳು ಆಸಕ್ತಿ ತೋರಿಸಿದ್ದಾರೆ.

ದಾವೋಸ್‌ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿಯೂ ಈ ಬಗ್ಗೆ ಚರ್ಚೆಯಾಗಿದೆ. ಇದಕ್ಕಾಗಿ ಮುಂದೆ ಬರುವ ಕೈಗಾರಿಕೆಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕಾಗಿದೆ. 300 ಕೆ ವಿ ಸಾಮರ್ಥ್ಯದಲ್ಲಿ ಪೈಲಟ್ ಪ್ರಾಜೆಕ್ಟ್ ಗೆ ಚಿಂತಿಸಲಾಗಿದೆ. ಪ್ರಸಕ್ತ ಈ ಬಗೆಗಿನ ಪ್ರಕ್ರಿಯೆಗಳು ಪ್ರಾಥಮಿಕ ಹಂತದಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದರು.

SCROLL FOR NEXT