ರಾಜ್ಯ

ಮೈಸೂರು: ಕಾಡಾನೆ ದಾಳಿಗೆ ಅರಣ್ಯ ವೀಕ್ಷಕ ಬಲಿ

Lingaraj Badiger

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ರಕ್ಷಣೆಯಲ್ಲಿ ತೊಡಗಿದ್ದ ಅರಣ್ಯ ವೀಕ್ಷಕರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಗುರುವಾರ ಮೈಸೂರಿನ ಮೊಳೆಯೂರು ವಲಯದಲ್ಲಿ ಹುಲಿ ಸಂರಕ್ಷಣಾ ಪಡೆಯ ವಿಶೇಷ ವಾಚರ್ ರಾಜು ಬಿ(38) ಅವರನ್ನು ಆನೆ ತುಳಿದು ಕೊಂದು ಹಾಕಿದೆ.

ರಾಜು ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ಸಿದ್ಧರಾಗಿ ಬಸ್ ಹತ್ತಲು ಕೆಬ್ಬೆಪುರ ಹಾಡಿಯಿಂದ ಮೊಳೆಯೂರಿಗೆ ನಡೆದುಕೊಂಡು ಬರುವ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಜುವಿನ ಮೃತದೇಹ ರಸ್ತೆ ಪಕ್ಕದ ಹಳ್ಳವೊಂದರಲ್ಲಿ ಬಿದಿದ್ದ ಪರಿಣಾಮ ಮಧ್ಯಾಹ್ನದವರೆಗೂ ಯಾರಿಗೂ ಮೃತದೇಹವಿರುವುದು ಗೊತ್ತಾಗಿರಲಿಲ್ಲ. ಆದರೆ ಮಧ್ಯಾಹ್ನ ರಾಜುವಿನ ಮಗಳು ಬಟ್ಟೆ ಒಗೆಯಲು ಹೋಗುವ ವೇಳೆ ತಂದೆಯ ಮೃತ ದೇಹವನ್ನು ಕಂಡು ಗಾಬರಿಗೊಂಡು ಗ್ರಾಮಸ್ಥರಿಗೆ ವಿಚಾರ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. 

ರಾಜು ಅವರು ಮಾಡಿದ ಉತ್ತಮ ಕೆಲಸಗಳನ್ನು ವಿಡಿಯೋ ಮಾಡುವ ಮೂಲಕ ಶ್ಲಾಘಿಸಿರುವ ಕರ್ನಾಟಕ ಅರಣ್ಯ ಇಲಾಖೆ, ಅವರು ಅನೇಕ ಕಳ್ಳ ಬೇಟೆಗಾರರನ್ನು ಹಿಡಿಯಲು ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದೆ.

SCROLL FOR NEXT